ಅನಧಿಕೃತ ಪಟಾಕಿ ಮಾರಾಟದ ವಿರುದ್ಧ ಸೂಕ್ತ ಕ್ರಮ: ಉಡುಪಿ ಎಡಿಸಿ

Update: 2018-11-04 07:56 GMT

ಉಡುಪಿ, ನ.4: ದೀಪಾವಳಿ ಹಬ್ಬಗಳ ಸಂದರ್ಭದಲ್ಲಿ ತಾತ್ಕಾಲಿಕ ಸುಡು ಮದ್ದು(ಪಟಾಕಿ) ಮಾರಾಟ ಮತ್ತು ಸುಡುವ ಬಗ್ಗೆ ಮುಂಜಾಗ್ರತಾ ಕ್ರಮಗಳನ್ನು ಅನುಸರಿಸುವಂತೆ ಸೂಚಿಸಿರುವ ಉಡುಪಿ ಜಿಲ್ಲಾಡಳಿತ, ಸುಡುಮದ್ದುಗಳನ್ನು ಅನಧಿಕೃತವಾಗಿ ಮಾರಾಟ ಮಾಡುವುದು ಕಂಡುಬಂದಲ್ಲಿ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದೆ.

ಸುಡುಮದ್ದುಗಳನ್ನು ಅಧಿಕೃತ ಪರವಾನಿಗೆ ಹೊಂದಿದ ಮಾರಾಟಗಾರರಿಂದ ಮಾತ್ರ ಖರೀದಿಸಬೇಕು. ಸುಡುಮದ್ದುಗಳ ಮೇಲೆ ಗುರುತಿಸಿದ ಸುರಕ್ಷತಾ ಮುಂಜಾಗ್ರತೆಗಳನ್ನು ಕಟ್ಟುನಿಟ್ಟಾಗಿ ಅನುಸರಿಸಬೇಕು. ಸುಡುಮದ್ದು ಉರಿಸಲು ಒಂದು ಕ್ಯಾಂಡಲ್ ಅಥವಾ ಅಗರಬತ್ತಿಯನ್ನು ಉಪಯೋಗಿಸಬೇಕು. ಸುಡು ಮದ್ದು ಹಚ್ಚುವ ಸ್ಥಳದಲ್ಲಿ ಕೈಗೆ ಎಟಕುವಂತೆ, ಹತ್ತಿರದಲ್ಲಿ ಒಂದು ಬಕೆಟ್ ನೀರನ್ನು ಇಟ್ಟುಕೊಳ್ಳಬೇಕು.

ಅಪಾಯಕಾರಿ ಸುಡುಮದ್ದುಗಳನ್ನು ಸುರಕ್ಷಿತವಾಗಿ, ಕೆಳಗೆ ಬೀಳಬಹುದಾದ ಬಯಲಿನಲ್ಲಿ ಉಪಯೋಗಿಸಬೇಕು. ಸುಡುಮದ್ದು ಗಳನ್ನು ಕೈಯಲ್ಲಿ ಹಿಡಿದು ಕೊಂಡು ಹಚ್ಚಬಾರದು. ಅವುಗಳನ್ನು ಕೆಳಗೆ ಇಟ್ಟು ಹೊತ್ತಿಸಿ ಬಹುದೂರ ಹೋಗಬೇಕು. ಸುಡುಮದ್ದುಗಳನ್ನು ಹೊತ್ತಿಸಲು ಯಾವುದೇ ಪಾತ್ರೆಗಳನ್ನು ಉಪಯೋಗಿಸಬಾರದು. ಸುಡುಮದ್ದುಗಳನ್ನು ಹಚ್ಚುವಾಗ ಎತ್ತರದ ತಡೆಗೋಡೆ ಗಳು, ಮರಗಳು, ವಿದ್ಯುತ್ ತಂತಿಗಳು, ಇರುವಲ್ಲಿ ಅವುಗಳ ಕೆಳಗೆ ಬಳಸ ಬಾರದು. ಸುಡುಮದ್ದುಗಳನ್ನು ಮನೆಯ ಒಳಗಡೆ ಹಾಗೂ ಸಾರ್ಜನಿಕ ರಸ್ತೆಯಲ್ಲಿ ಬಳಸಬಾರದು.

ಖೋಟಾ/ಅಕ್ರಮ ಸುಡು ಮದ್ದುಗಳನ್ನು ಉಪಯೋಗಿಸಬಾರದು. ಕಣ್ಣು ಮತ್ತು ಕಿವಿಗಳ ಸುರಕ್ಷತೆ ದೃಷ್ಠಿ ಯಿಂದ ಯಾವುದೇ ಸುಡುಮದ್ದುಗಳನ್ನು ಹಚ್ಚುವಾಗ ವಿಫಲವಾದಲ್ಲಿ ಮತ್ತೆ ಹತ್ತಿಸಲು ಹೋಗದೆ ಸುಮಾರು 15-20ನಿಮಿಷ ನಿರೀಕ್ಷಿಸಿ, ನಂತರ ಅವುಗಳನ್ನು ಬಕೆಟ್ ನೀರಲ್ಲಿ ಹಾಕಬೇಕು. ಮಕ್ಕಳು ಪಟಾಕಿಗಳನ್ನು ಬಳಸುವಾಗ ಅವರ ಹತ್ತಿರ ಪೋಷಕರು ಇರಬೇಕು. ಸುಡುಮದ್ದುಗಳನ್ನು ರಾತ್ರಿ 8ಗಂಟೆಯಿಂದ 10 ಗಂಟೆಯವರೆಗೆ ಮಾತ್ರ ಸಿಡಿಸ ಬೇಕು ಎಂದು ಉಡುಪಿ ಎಡಿಸಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News