ಪ್ರೊ. ಸೂಫಿ ಅನ್ವರ್ ಕೋಡಿಜಾಲ್‌ಗೆ ಮಧ್ಯ ಪ್ರಾಚ್ಯ ಶೈಕ್ಷಣಿಕ ನಾಯಕತ್ವ ಪ್ರಶಸ್ತಿ

Update: 2018-11-04 08:18 GMT

ದುಬೈ, ನ. 4: ಯುಎಇಯ ಬಿರ್ಲಾ ತಂತ್ರಜ್ಞಾನ ಸಂಸ್ಥೆಯ ಅಂತರ್‌ ರಾಷ್ಟ್ರೀಯ ಕ್ಯಾಂಪಸ್ (ಆರ್‌ಎಕೆ)ಯ ವ್ಯವಸ್ಥಾಪನಾ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸುತ್ತಿರುವ ಪ್ರೊ. ಸೂಫಿ ಅನ್ವರ್ ಕೋಡಿಜಾಲ್ ಅವರಿಗೆ 2018ನೇ ಸಾಲಿನ ಅತ್ಯುತ್ತಮ ವ್ಯವಸ್ಥಾಪನಾ ಉಪನ್ಯಾಸಕರಾಗಿ ಪ್ರತಿಷ್ಠಿತ ಮಧ್ಯ ಪ್ರಾಚ್ಯ ಶೈಕ್ಷಣಿಕ ನಾಯಕತ್ವ ಪ್ರಶಸ್ತಿಯನ್ನು ನೀಡಲಾಗಿದೆ.

ಪ್ರೊ. ಸೂಫಿ ಅನ್ವರ್ ಅವರ ಶೈಕ್ಷಣಿಕ ಶ್ರೇಷ್ಠತೆ, ಮಾದರಿ ನಾಯಕತ್ವ ಮತ್ತು ವ್ಯವಸ್ಥಾಪನೆಯಲ್ಲಿ ಉನ್ನತ ಶಿಕ್ಷಣ ಹಾಗೂ ಇತರರ ಜೀವನದಲ್ಲಿ ಬದಲಾವಣೆ ತಂದಿರುವ ಕಾರ್ಯವನ್ನು ಪರಿಗಣಿಸಿ ಅವರಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಯುಎಇಯಲ್ಲಿ ಅ. 4ರಂದು ನಡೆದ ವರ್ಲ್ಡ್ ಸಸ್ಟೇನೇಬಲ್ ಕಾಂಗ್ರೆಸ್‌ನ ಭಾಗವಾಗಿ ಏಶ್ಯಾ ಉದ್ಯಮಗಳ ಒಕ್ಕೂಟ ಮತ್ತು ಸಿಎಂಒ ಏಶ್ಯಾ ಜೊತೆಯಾಗಿ ಈ ಪ್ರಶಸ್ತಿಯನ್ನು ನೀಡಿತು.

ಹಾಜಿ ಇಬ್ರಾಹೀಂ ಕೊಡಿಜಾಲ್ ಅವರ ಸಹೋದರ ಹಾಜಿ ಅಬ್ದುಲ್ ಖಾದರ್ ಕೋಡಿಜಾಲ್‌ ಮತ್ತು ಮರಿಯಮ್ಮ ದಂಪತಿಯ ಪುತ್ರ ಸೂಫಿ ಅನ್ವರ್ ಕೋಡಿಜಾಲ್ ಅವರು ಹದಿನೈದು ವರ್ಷಗಳಿಂದ ಗಲ್ಫ್ ರಾಷ್ಟ್ರದಲ್ಲಿ ಸೇವೆ ಸಲ್ಲಿಸುತ್ತಿದ್ದಾರೆ. 1999ರಲ್ಲಿ ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಎಂಬಿಎ ಶಿಕ್ಷಣ ಮುಗಿಸಿದ ಪ್ರೊ. ಸೂಫಿ ಅನ್ವರ್ ಕೋಡಿಜಾಲ್ ಸದ್ಯ ಮೆಕ್ಸಿಕೊದಲ್ಲಿರುವ ಅಝ್ಟೆಕ ವಿಶ್ವವಿದ್ಯಾನಿಲಯದಲ್ಲಿ ಪಿಎಚ್‌ಡಿ ವ್ಯಾಸಂಗ ಮಾಡುತ್ತಿದ್ದಾರೆ.

ಹಲವು ಅಂತರ್‌ ರಾಷ್ಟ್ರೀಯ ಪತ್ರಿಕೆಗಳಲ್ಲಿ ಮತ್ತು ಪುಸ್ತಕಗಳಲ್ಲಿ ತನ್ನ ಸಂಶೋಧನಾ ಲೇಖನಗಳನ್ನು ಪ್ರಕಟಿಸಿರುವ ಪ್ರೊ. ಸೂಫಿ ಅನ್ವರ್ ಅವರು ಶಾಲಾ, ಕಾಲೇಜುಗಳಲ್ಲಿ ಅನೇಕ ಪ್ರಶಸ್ತಿಗಳನ್ನು ತಮ್ಮದಾಗಿಸಿಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News