ಶಬರಿಮಲೆ ಭಕ್ತನ ಎದೆಗೆ ತುಳಿದ ಪೊಲೀಸ್: ವೈರಲ್ ಆದ ಫೋಟೊ ಹಿಂದಿನ ವಾಸ್ತವ ಇಲ್ಲಿದೆ

Update: 2018-11-04 09:23 GMT

ಹೊಸದಿಲ್ಲಿ, ನ.4: ದಿಲ್ಲಿ ಶಾಸಕ ಕಪಿಲ್ ಮಿಶ್ರಾ ನವೆಂಬರ್ 2ರಂದು ಒಂದು ಫೋಟೊ ಟ್ವೀಟ್ ಮಾಡಿದ್ದರು. ಅಯ್ಯಪ್ಪ  ಭಕ್ತನೊಬ್ಬ ಕೈಯಲ್ಲಿ ಮೂರ್ತಿ ಹಿಡಿದುಕೊಂಡಿದ್ದು, ಪೊಲೀಸ್ ಪೇದೆಯೊಬ್ಬ ಆತನ ಎದೆಗೆ ತುಳಿಯುತ್ತಿರುವ ದೃಶ್ಯದ ಚಿತ್ರ ಅದು. "ಈ ಭಕ್ತನ ಕಣ್ಣಿನಲ್ಲಿ ಕ್ರೌರ್ಯಕ್ಕೆ ತುತ್ತಾದ ಭೀತಿ ಇಲ್ಲ; ದಬ್ಬಾಳಿಕೆಯ ಭಯ ಇಲ್ಲ; ಇದು ನಂಬಿಕೆಯ ಶಕ್ತಿ. #ಶಬರಿಮಲೆ#ಅಯ್ಯಪ್ಪ" ಎಂಬ ಬರಹದೊಂದಿಗೆ ಪೋಸ್ಟ್ ಮಾಡಿದ ಈ ಚಿತ್ರ ವೈರಲ್ ಆಗಿತ್ತು. ಶಬರಿಮಲೆ ಭಕ್ತ ಕ್ರೌರ್ಯಕ್ಕೆ ಒಳಗಾಗಿದ್ದಾನೆ ಎಂದು ಬಿಂಬಿಸುತ್ತಿತ್ತು. ಇದನ್ನು 2,700 ಮಂದಿ ಶೇರ್ ಮಾಡಿದ್ದು, 1,400 ಬಾರಿ ಮರುಟ್ವೀಟ್ ಆಗಿತ್ತು.

ಈ ಚಿತ್ರವನ್ನು Squint Woke Neon (@squintneon)  ಮತ್ತು ಹಿಂದೂ ಮಹಾಸಭಾ ಕಾರ್ಯಕರ್ತ ಕಮಲೇಶ್ ತಿವಾರಿ ಮೊದಲು ಟ್ವೀಟ್ ಮಾಡಿದ್ದರು. "ಅಯ್ಯಪ್ಪ ಭಕ್ತರ ಮೇಲೆ ಕೇರಳ ಪೊಲೀಸರ ದೌರ್ಜನ್ಯ ನೋಡಿ" ಎಂದು ಅವರು ಶೀರ್ಷಿಕೆ ಹಾಕಿದ್ದರು. ಇದು 1,300 ಬಾರಿ ಮರುಟ್ವೀಟ್ ಆಗಿತ್ತು.

ಹಲವು ಬಲಪಂಥೀಯ ಹ್ಯಾಂಡಲ್‍ಗಳು ಟ್ವಿಟರ್ ಹಾಗೂ ಫೇಸ್‍ಬುಕ್‍ ನಲ್ಲಿ ಇದನ್ನು ಟ್ವೀಟ್ ಮಾಡಿದ್ದವು. ಆದರೆ ಇದು ಫೋಟೊ ಶೂಟ್ ಆಗಿದ್ದು, ಶಬರಿಮಲೆ ಪ್ರತಿಭಟನೆಗೆ ಸಂಬಂಧಿಸಿದ್ದಲ್ಲ ಎನ್ನುವುದು ಇದೀಗ ಬಹಿರಂಗವಾಗಿದೆ. ರಜನೀಶ್ ಕುರುಪ್ ಎಂಬ ವ್ಯಕ್ತಿಯ ಈ ಫೋಟೊಶೂಟ್ ಅನ್ನು ಕೇರಳ ಪೊಲೀಸರ ದೌರ್ಜನ್ಯ ಎಂದು ಬಿಂಬಿಸಿ ಹರಡಲಾಗುತ್ತಿದೆ ಎಂದು ಪತ್ರಕರ್ತ ಬೊಬಿನ್ಸ್ ಅಬ್ರಹಾಂ ಪತ್ತೆ ಮಾಡಿದ್ದಾರೆ.

ಕುರುಪ್ ಅವರ ಮತ್ತೊಂದು ಚಿತ್ರವನ್ನು ಅಬ್ರಹಾಂ ಪೋಸ್ಟ್ ಮಾಡಿದ್ದು, ಅದರಲ್ಲಿ ಫೋಟೊಗ್ರಾಫರ್‍ನ ಮಧುಕೃಷ್ಣ ಫೋಟೊಗ್ರಫಿ ಎಂಬ ವಾಟರ್ ಮಾರ್ಕ್ ಇರುವುದನ್ನು ಕಾಣಬಹುದು. ಶಾಸಕರು ಶೇರ್ ಮಾಡಿರುವ ಫೋಟೊ ನಾಲ್ಕು ದಿನಗಳ ಹಿಂದಿನ ಫೋಟೊಶೂಟ್ ಎನ್ನುವುದನ್ನು ಸ್ವತಃ ರಾಜೇಶ್ ಕುರುಪ್ ಅವರೇ ಸ್ಪಷ್ಟಪಡಿಸಿದ್ದಾರೆ.

ಎರಡನೇ ಚಿತ್ರದ ಬಗ್ಗೆ ಮಧುಕೃಷ್ಣ ಸ್ಪಷ್ಟನೆ ನೀಡಿದ್ದು, ಇದು ಅಕ್ಟೋಬರ್ 6ರಂದು ತೆಗೆದ ಚಿತ್ರ. ಪ್ರತಿಭಟನೆ ಆರಂಭವಾಗಿರುವುದು ಅಕ್ಟೋಬರ್ 17ರಂದು ಎಂದು ಅವರು ಹೇಳಿದ್ದಾರೆ.

ಕೃಪೆ: altnews.in

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News