ಬ್ರಿಟನ್ ನೀಡಿದ್ದ 1 ಬಿಲಿಯನ್ ಪೌಂಡ್ ನೆರವನ್ನು ಪ್ರತಿಮೆ ನಿರ್ಮಾಣಕ್ಕೆ ಖರ್ಚು ಮಾಡಿದ ಭಾರತ
ಹೊಸದಿಲ್ಲಿ, ನ.4: ಮೋದಿ ಸರಕಾರ ನಿರ್ಮಿಸಿದ ಸರ್ದಾರ್ ವಲ್ಲಭಭಾಯ್ ಪಟೇಲ್ ಅವರ ಪ್ರತಿಮೆಗೆ ಸಂಬಂಧಿಸಿದ ವಿವಾದ ಇದೀಗ ವಿದೇಶಕ್ಕೂ ತಲುಪಿದೆ. ಬ್ರಿಟನ್ ನೀಡಿದ್ದ 1 ಬಿಲಿಯನ್ ಪೌಂಡ್ ಆರ್ಥಿಕ ನೆರವನ್ನು ಭಾರತವು ವಿಲಾಸಿ ಪ್ರತಿಮೆ ನಿರ್ಮಾಣಕ್ಕೆ ವೆಚ್ಚ ಮಾಡಿದೆ ಎಂದು ಬ್ರಿಟಿಷ್ ಮಾಧ್ಯಮವೊಂದು ವರದಿ ಮಾಡಿದೆ.
‘ಡೈಲಿ ಮೇಲ್’ನಲ್ಲಿ ಪ್ರಕಟವಾದ ಲೇಖನವೊಂದು ಪ್ರತಿಮೆ ನಿರ್ಮಿಸಿದ ಭಾರತ ಸರಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದೆ. 330 ಮಿಲಿಯನ್ ಪೌಂಡ್ ಮೊತ್ತದ ಪ್ರತಿಮೆ ನಿರ್ಮಾಣಕ್ಕೆ 56 ತಿಂಗಳುಗಳು ತಗಲಿದ್ದು, ಇಂಗ್ಲೆಂಡ್ ನ ತೆರಿಗೆದಾರರು ಭಾರತಕ್ಕೆ 1.17 ಬಿಲಿಯನ್ ಪೌಂಡ್ ಗಳನ್ನು ದಾನ ನೀಡಿದ್ದರು ಎಂದಿದೆ.
“ಬ್ರಿಟನ್ ನಿಂದ ಹೋದ ಹಣವನ್ನು ಭಾರತವು ಸರ್ದಾರ್ ಪಟೇಲ್ ರ ಪ್ರತಿಮೆ ನಿರ್ಮಾಣಕ್ಕೆ ಬಳಸಿದೆ” ಎಂದು ಲೇಖನ ಆರೋಪಿಸಿದೆ. ಪ್ರತಿಮೆ ನಿರ್ಮಾಣ ಯೋಜನೆ ಆರಂಭವಾದ 2012ರಲ್ಲಿ ಯುಕೆ ಭಾರತಕ್ಕೆ 300 ಮಿಲಿಯನ್ ಪೌಂಡ್ ಗಳನ್ನು ನೀಡಿತ್ತು. 2013ರಲ್ಲಿ 268 ಮಿಲಿಯನ್ ಪೌಂಡ್ ಗಳನ್ನು, 2014ರಲ್ಲಿ 278 ಮಿಲಿಯನ್ ಪೌಂಡ್ ಗಳನ್ನು, 2015ರಲ್ಲಿ 185 ಮಿಲಿಯನ್ ಪೌಂಡ್ ಗಳನ್ನು ನೀಡಲಾಗಿದೆ” ಎಂದು ಲೇಖನ ತಿಳಿಸಿದೆ.
“1.1 ಬಿಲಿಯನ್ ಪೌಂಡ್ ನೆರವನ್ನು ನಮ್ಮಿಂದ ಪಡೆದು ಅದೇ ಸಮಯ 330 ಮಿಲಿಯನ್ ಪೌಂಡ್ ಗಳನ್ನು ಪ್ರತಿಮೆಯೊಂದಕ್ಕೆ ವೆಚ್ಚ ಮಾಡುವುದು ಒಟ್ಟು ಅಸಂಬದ್ಧವಾಗಿದೆ” ಎಂದು ಬ್ರಿಟನ್ ಸಂಸದ ಪೀಟರ್ ಬೋನ್ ಹೇಳಿರುವುದಾಗಿ ‘ಡೈಲಿ ಮೇಲ್’ ವರದಿ ಮಾಡಿದೆ.