×
Ad

ಉ.ಪ್ರ:'ತ್ರಿವಳಿ ತಲಾಖ್ ಪ್ರಮುಖ್'ರನ್ನಾಗಿ 100 ಮಹಿಳೆಯರನ್ನು ನೇಮಿಸಲಿರುವ ಬಿಜೆಪಿ

Update: 2018-11-04 19:51 IST

ಲಕ್ನೋ,ನ.4: ಉತ್ತರ ಪ್ರದೇಶ ಬಿಜೆಪಿಯು ತ್ರಿವಳಿ ತಲಾಖ್‌ನ ಬಲಿಪಶುಗಳು ಮತ್ತು ಅವರ ಮಕ್ಕಳ ಪುನರ್ವಸತಿಯನ್ನು ಖಚಿತಪಡಿಸಿಕೊಳ್ಳಲು ರಾಜ್ಯಾದ್ಯಂತ ಸುಮಾರು 100 ಮಹಿಳೆಯರನ್ನು 'ತ್ರಿವಳಿ ತಲಾಖ್ ಪ್ರಮುಖ್'ರನ್ನಾಗಿ ಶೀಘ್ರವೇ ನೇಮಕಗೊಳಿಸಲಿದೆ ಎಂದು ಪಕ್ಷದ ರಾಜ್ಯ ಅಲ್ಪಸಂಖ್ಯಾತ ಘಟಕದ ಕಾರ್ಯದರ್ಶಿ ನಾಝಿಯಾ ಆಲಂ ಅವರು ರವಿವಾರ ಇಲ್ಲಿ ತಿಳಿಸಿದರು.

ಶರೀಯತ್ ಮತ್ತು ಕಾನೂನಿನ ಉತ್ತಮ ಜ್ಞಾನವಿರುವ ಹಾಗೂ ತ್ರಿವಳಿ ತಲಾಖ್ ಸಂತ್ರಸ್ತರ ಬದುಕುಗಳಲ್ಲಿ ಸಾಮಾಜಿಕ ಬದಲಾವಣೆಗಳನ್ನು ತರಬಲ್ಲ ಸುಶಿಕ್ಷಿತ ಮಹಿಳೆಯರನ್ನು ಪ್ರಮುಖ್‌ರನ್ನಾಗಿ ನೇಮಕಗೊಳಿಸಲಾಗುವುದು. ಈ ಸಾಮಾಜಿಕ ಪಿಡುಗನ್ನು ನಿರ್ಮೂಲಿಸಲು ಕೆಲವು ಸಂತ್ರಸ್ತರು ಈಗಾಗಲೇ ನಮ್ಮಾಂದಿಗೆ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂದು ಯೋಜನೆಯ ಒಟ್ಟಾರೆ ಉಸ್ತುವಾರಿಯನ್ನು ಹೊಂದಿರುವ ಆಲಂ ಹೇಳಿದರು.

ದೀಪಾವಳಿಯ ಬಳಿಕ ಅಭ್ಯರ್ಥಿಗಳನ್ನು ಅಂತಿಮಗೊಳಿಸುವ ಸಾಧ್ಯತೆಯಿದೆ ಮತ್ತು ರಾಜ್ಯದಲ್ಲಿಯ ತ್ರಿವಳಿ ತಲಾಖ್ ಸಂತ್ರಸ್ತರ ಸಂಖ್ಯೆಯನ್ನು ತಿಳಿಯಲು ಡಿಸೆಂಬರ್‌ನಲ್ಲಿ ಸಮೀಕ್ಷೆಯೊಂದು ನಡೆಯಲಿದೆ ಎಂದ ಅವರು,ಸಂತ್ರಸ್ತರನ್ನು ಆರ್ಥಿಕವಾಗಿ ಸ್ವಾವಲಂಬಿಗಳಾಗಿಸುವ ಪ್ರಯತ್ನವಾಗಿ ಪ್ರಧಾನ ಮಂತ್ರಿ ಕೌಶಲ ವಿಕಾಸ ಯೋಜನೆಯಲ್ಲಿ ಅವರು ತೊಡಗಿಕೊಳ್ಳಲು ನೆರವು ನೀಡಲಾಗುವುದು ಎಂದರು.

ಪವಿತ್ರ ಕುರ್‌ಆನ್ ಮತ್ತು ಶರೀಯತ್ ಕುರಿತು ಮನೆಮಾಡಿರುವ ತಪ್ಪು ಗ್ರಹಿಕೆಗಳನ್ನು ನಿವಾರಿಸಲು ಬಿಜೆಪಿ ಅಲ್ಪಸಂಖ್ಯಾತರ ಘಟಕವು ಜಾಗ್ರತಿ ಅಭಿಯಾನವನ್ನೂ ಹಮ್ಮಿಕೊಳ್ಳಲಿದೆ ಎಂದು ಅವರು ತಿಳಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News