ಅಸ್ಸಾಂ: ಗುಂಪಿನಿಂದ ಥಳಿತಕ್ಕೊಳಗಾದ ಶಂಕಿತ ಉಗ್ರರ ಸಾವು

Update: 2018-11-04 14:39 GMT

ಸಿಲ್ಚಾರ್,ನ.4: ಕಾಚಾರ್ ಜಿಲ್ಲೆಯಲ್ಲಿ ಶನಿವಾರ ಉಗ್ರಗಾಮಿಗಳೆಂದು ಶಂಕಿಸಲಾಗಿದ್ದ ಇಬ್ಬರು ಶಸ್ತ್ರಸಜ್ಜಿತ ಅಪರಿಚಿತ ವ್ಯಕ್ತಿಗಳು ಗುಂಪಿನಿಂದ ಥಳಿತಕ್ಕೊಳಗಾಗಿ ಸಾವನ್ನಪ್ಪಿದ್ದಾರೆ.

ಮೃತರ ಗುರುತು ಇನ್ನಷ್ಟೇ ಪತ್ತೆಯಾಗಬೇಕಿದೆ,ಆದರೆ ಅವರು ನ್ಯಾಷನಲ್ ಸೋಷಿಯಲ್ ಕೌನ್ಸಿಲ್ ಆಫ್ ನಾಗಾಲ್ಯಾಂಡ್(ಖಾಪ್ಲಾಂಗ್) ಸಂಘಟನೆಗೆ ಸೇರಿದವರು ಎಂದು ಶಂಕಿಸಲಾಗಿದೆ ಎಂದು ಕಾಚಾರ್ ಎಸ್‌ಪಿ ರಾಕೇಶ ರೌಷನ್ ತಿಳಿಸಿದರು.

ಮಣಿಪುರಕ್ಕೆ ಹೊಂದಿಕೊಂಡಿರುವ ಅಸ್ಸಾಂ ಗಡಿಯ ಲಖಿಪುರ ಉಪವಿಭಾಗದ ಹರಿನಗರದಲ್ಲಿ ಈ ಘಟನೆ ನಡೆದಿದೆ. ಎರಡು ದಿನಗಳ ಹಿಂದಷ್ಟೇ ತಿನ್ಸುಕಿಯಾ ಜಿಲ್ಲೆಯಲ್ಲಿ ಉಲ್ಫಾ(ಸ್ವತಂತ್ರ)ದ ಕಾರ್ಯಕರ್ತರೆಂದು ಶಂಕಿಸಲಾಗಿರುವ ಅಪರಿಚಿತ ಬಂದೂಕುಧಾರಿಗಳು ಐವರು ಬಂಗಾಳಿ ಭಾಷಿಕ ವ್ಯಕ್ತಿಗಳನ್ನು ಹತ್ಯೆ ಮಾಡಿ,ಇನ್ನೋರ್ವನನ್ನು ಗಾಯಗೊಳಿಸಿದ್ದರು.

ಶನಿವಾರ ಪೂರ್ವಾಹ್ನ 11:15ರ ಸುಮಾರಿಗೆ ಇಬ್ಬರು ವ್ಯಕ್ತಿಗಳು ಹರಿನಗರದ ಮಾರುಕಟ್ಟೆಯ ಬಳಿ ತಮಗೆ ಸಾಗಬೇಕಿರುವ ರಸ್ತೆಯ ಕುರಿತು ಜನರಲ್ಲಿ ವಿಚಾರಿಸಿದ್ದರು. ಅವರು ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಹೊಂದಿರುವುದನ್ನು ಗಮನಿಸಿದ್ದ ಗ್ರಾಮಸ್ಥರು ಸ್ಥಳೀಯರ ಮೇಲೆ ದಾಳಿ ನಡೆಸಲು ಬಂದಿದ್ದಾರೆಂದು ಶಂಕಿಸಿ ಅವರನ್ನು ಮುತ್ತಿ ಹಿಗ್ಗಾಮುಗ್ಗಾ ಥಳಿಸಿದ್ದರು. ಸ್ಥಳಕ್ಕೆ ಧಾವಿಸಿದ ಪೊಲೀಸರು ಗಂಭೀರವಾಗಿ ಗಾಯಗೊಂಡಿದ್ದ ಅವರನ್ನು ಸಿಲ್ಚಾರ್ ಮೆಡಿಕಲ್ ಕಾಲೇಜು ಆಸ್ಪತ್ರೆಗೆ ಸಾಗಿಸಿದರಾದರೂ ಆ ವೇಳೆೆಗಾಗಲೇ ಮೃತಪಟ್ಟಿದ್ದರು.

ಮೃತವ್ಯಕ್ತಿಗಳು ಎರಡು ಎಕೆ-56 ರೈಫಲ್‌ಗಳು,ಎರಡು ಇನ್ಸಾಸ್ ರೈಫಲ್‌ಗಳು,ಒಂದು ಚೀನಿ ಲೈಟ್ ಮಷಿನ್‌ಗನ್,ಚೀನಿ ಹ್ಯಾಂಡ್ ಗ್ರೆನೇಡ್,12 ಬೋರ್‌ನ ಬಂದೂಕು ಮತ್ತು ಭಾರೀ ಪ್ರಮಾಣದ ಮದ್ದುಗುಂಡುಗಳನ್ನು ಸಾಗಿಸುತ್ತಿದ್ದರು. ಹೀಗಾಗಿ ಅವರು ಉಗ್ರಗಾಮಿಗಳಾಗಿದ್ದರು ಎಂದು ಶಂಕಿಸಲಾಗಿದೆ ಎಂದು ಕಾಚಾರ್ ಹೆಚ್ಚುವರಿ ಎಸ್‌ಪಿ ರಾಕೇಶ್ ರೆಡ್ಡಿ ತಿಳಿಸಿದರು.

ತನ್ಮಧ್ಯೆ ತಿನ್ಸುಕಿಯಾ ಹತ್ಯೆಗಳನ್ನು ವಿರೋಧಿಸಿ ವಿವಿಧ ಸಂಘಟನೆಗಳು ಶನಿವಾರ ಕರೆ ನೀಡಿದ್ದ ರಾಜ್ಯವ್ಯಾಪಿ ಬಂದ್‌ನಲ್ಲಿ ಭಾಗಿಯಾಗಿದ್ದಕ್ಕಾಗಿ 1,200ಕ್ಕೂ ಅಧಿಕ ಜನರನ್ನು ಪೊಲೀಸರು ಬಂಧಿಸಿದ್ದಾರೆ.

ತೃಣಮೂಲ ಕಾಂಗ್ರೆಸ್ ನಿಯೋಗವೊಂದು ಹತ್ಯೆಯಾದ ಐವರ ಕುಟುಂಬಗಳನ್ನು ಭೇಟಿಯಾಗಿ ತಲಾ ಒಂದು ಲ.ರೂ.ಗಳ ಪರಿಹಾರವನ್ನು ವಿತರಿಸಿದೆ.

ಈ ಹತ್ಯೆಗಳಲ್ಲಿ ತನ್ನ ಕೈವಾಡವನ್ನು ಉಲ್ಫಾ(ಸ್ವತಂತ್ರ) ನಿರಾಕರಿಸಿದೆಯಾದರೂ ಅದರ ನಾಯಕರನ್ನು ಪೊಲೀಸರು ವಿಚಾರಣೆಗಾಗಿ ತಮ್ಮ ವಶಕ್ಕೆ ಪಡೆದುಕೊಂಡಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News