ಅಸಿಯಾ ವಿಮಾನ ಪ್ರಯಾಣ ನಿಷೇಧ ಪಟ್ಟಿಯಲ್ಲಿ: ಖುಲಾಸೆ ಪ್ರಶ್ನಿಸುವ ಮೇಲ್ಮನವಿಯನ್ನು ವಿರೋಧಿಸದಿರಲು ಪಾಕ್ ನಿರ್ಧಾರ

Update: 2018-11-04 16:18 GMT

ಇಸ್ಲಾಮಾಬಾದ್, ನ. 4: ದೇವನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಒಳಗಾಗಿರುವ ಕ್ರೈಸ್ತ ಮಹಿಳೆ ಅಸಿಯಾ ಬೀಬಿ ಖುಲಾಸೆಯನ್ನು ಪ್ರಶ್ನಿಸಿ ಸುಪ್ರೀಂ ಕೋರ್ಟ್‌ಗೆ ಮೇಲ್ಮನವಿ ಸಲ್ಲಿಸಲು ಪ್ರತಿಭಟನಕಾರರಿಗೆ ಪಾಕಿಸ್ತಾನ ಸರಕಾರ ಶನಿವಾರ ಅನುಮತಿ ನೀಡಿದೆ ಹಾಗೂ ಅವರನ್ನು ‘ವಿಮಾನ ಪ್ರಯಾಣ ನಿಷೇಧ’ ಪಟ್ಟಿಯಲ್ಲಿರಿಸಿದೆ.

ಈ ಬೆಳವಣಿಗೆಯ ಹಿನ್ನೆಲೆಯಲ್ಲಿ, ಅಸಿಯಾ ಬೀಬಿಯ ಭವಿಷ್ಯ ಡೋಲಾಯಮಾನವಾಗಿದೆ.

2010ರಿಂದ ಸೆರೆಮನೆಯಲ್ಲಿರುವ ಅಸಿಯಾರನ್ನು ಪಾಕಿಸ್ತಾನದ ಸುಪ್ರೀಂ ಕೋರ್ಟ್ ಬುಧವಾರ ದೋಷಮುಕ್ತಗೊಳಿಸಿತ್ತು. ಇದು ತೀವ್ರವಾದಿಗಳ ಕೆಂಗಣ್ಣಿಗೆ ಕಾರಣವಾಗಿದ್ದು, ಅವರು ದೇಶಾದ್ಯಂತ ರಸ್ತೆ ಬಂದ್ ಮಾಡಿ ಪ್ರತಿಭಟನೆ ನಡೆಸಿದ್ದರು.

ಅಸಿಯಾ ಬೀಬಿಯನ್ನು ‘ವಿಮಾನ ಪ್ರಯಾಣ ನಿಷೇಧ ಪಟ್ಟಿ’ಯಲ್ಲಿರಿಸುವ ಹಾಗೂ ತೀರ್ಪಿನ ವಿರುದ್ಧ ಸಲ್ಲಿಸಲಾಗುವ ಮೇಲ್ಮನವಿಯನ್ನು ವಿರೋಧಿಸದಿರುವ ಒಪ್ಪಂದಕ್ಕೆ ಸರಕಾರ ಬಂದ ಬಳಿಕ, ಶುಕ್ರವಾರ ರಾತ್ರಿ ಪ್ರತಿಭಟನಕಾರರು ಬಂದ್ ಹಿಂದೆಗೆದುಕೊಂಡಿದ್ದಾರೆ.

‘‘ಅಸಿಯಾ ಬೀಬಿ ದೇಶದಿಂದ ಹೊರಹೋಗಲು ಸಾಧ್ಯವಾಗದಂತೆ ಆದಷ್ಟು ಬೇಗ ಅವರನ್ನು ವಿದೇಶ ಪ್ರಯಾಣ ನಿಯಂತ್ರಣ ಪಟ್ಟಿಯಲ್ಲಿರಿಸುವಂತೆ ನಾವು ಸುಪ್ರೀಂ ಕೋರ್ಟ್‌ಗೆ ಮನವಿ ಮಾಡಿದ್ದೇವೆ’’ ಎಂದು ಬೀಬಿ ವಿರುದ್ಧ ಮೊಕದ್ದಮೆ ದಾಖಲಿಸಿರುವ ಕಾರಿ ಸಲಾಮ್‌ರ ವಕೀಲ ಗುಲಾಮ್ ಮುಸ್ತಾಫ ಚೌಧರಿ ಹೇಳಿದ್ದಾರೆ.

ಮೊದಲು ಪ್ರತಿಭಟನಕಾರರನ್ನು ಎದುರಿಸುವ ಸೂಚನೆ ನೀಡಿ, ಬಳಿಕ ಅವರಿಗೆ ಮಣಿದ ಇಮ್ರಾನ್ ಖಾನ್ ಸರಕಾರವನ್ನು ಬೀಬಿಯ ವಕೀಲ ಸೈಫುಲ್ ಮುಲುಕ್ ಮತ್ತು ಪಾಕಿಸ್ತಾನಿ ಮಾಧ್ಯಮಗಳು ಟೀಕಿಸಿವೆ.

ನ್ಯಾಯಕ್ಕಾಗಿನ ಹೋರಾಟ ಮುಂದುವರಿಯಲೇಬೇಕು: ಅಸಿಯಾ ಬೀಬಿ ವಕೀಲ

‘‘ತೀವ್ರವಾದಿಗಳ ಪ್ರತಿಭಟನೆ ದುರದೃಷ್ಟಕರ, ಆದರೆ ಅನಿರೀಕ್ಷಿತವಲ್ಲ’’ ಎಂದು ಅಸಿಯಾ ಬೀಬಿ ವಕೀಲ ಸೈಫುಲ್ ಮುಲುಕ್ ಹೇಳಿದ್ದಾರೆ.

‘‘ಆದರೆ, ಸರಕಾರದ ನಿಲುವು ನೋವು ತಂದಿದೆ. ದೇಶದ ಅತ್ಯುನ್ನತ ನ್ಯಾಯಾಲಯದ ಆದೇಶವನ್ನೂ ಅನುಷ್ಠಾನಗೊಳಿಸಲು ಅವರಿಗೆ ಸಾಧ್ಯವಾಗುತ್ತಿಲ್ಲ’’ ಎಂದು ಅವರು ಹೇಳಿದ್ದಾರೆ.

‘‘ನ್ಯಾಯಕ್ಕಾಗಿನ ಹೋರಾಟ ಮುಂದುವರಿಯಲೇಬೇಕು’’ ಎಂದಿದ್ದಾರೆ.

ಇದು ಸರಕಾರದ ಇನ್ನೊಂದು ಶರಣಾಗತಿ ಎಂಬುದಾಗಿ ದೇಶದ ಅತ್ಯಂತ ಹಳೆಯ ಪತ್ರಿಕೆ ‘ಡಾನ್’ ತನ್ನ ಸಂಪಾದಕೀಯದಲ್ಲಿ ಸರಕಾರವನ್ನು ಟೀಕಿಸಿದೆ.

ಪಾಕ್‌ನಿಂದ ಹೊರಹೋಗಲು ನೆರವು ನೀಡಿ: ಟ್ರಂಪ್‌ಗೆ ಅಸಿಯಾ ಗಂಡನ ಮನವಿ

ಪಾಕಿಸ್ತಾನದಲ್ಲಿ ದೇವನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆ ಎದುರಿಸುತ್ತಿರುವ ಅಸಿಯಾ ಬೀಬಿಯ ಕುಟುಂಬ ಸದಸ್ಯರಿಗೆ ಪ್ರಾಣಾಪಾಯವಿದೆ ಎಂದು ಹೇಳಿರುವ ಅವರ ಗಂಡ ಆಶಿಕ್ ಮಸಿಹ್, ತಮಗೆ ಆಶ್ರಯ ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ಮನವಿ ಮಾಡಿದ್ದಾರೆ.

ಅವರು ಇದೇ ಮನವಿಯನ್ನು ಬ್ರಿಟನ್ ಮತ್ತು ಕೆನಡಕ್ಕೂ ಮಾಡಿದ್ದಾರೆ.

‘‘ಪಾಕಿಸ್ತಾನದಿಂದ ಹೊರಹೋಗಲು ನಮಗೆ ನೆರವು ನೀಡುವಂತೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ಗೆ ನಾನು ಮನವಿ ಮಾಡುತ್ತೇನೆ’’ ಎಂದು ಬ್ರಿಟಿಶ್ ಪಾಕಿಸ್ತಾನಿ ಕ್ರಿಶ್ಚಿಯನ್ ಅಸೋಸಿಯೇಶನ್ ದಾಖಲಿಸಿದ ವೀಡಿಯೊವೊಂದರಲ್ಲಿ ಮಸಿಹ್ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News