ದಿಲ್ಲಿಯ ಸಿಗ್ನೇಚರ್ ಸೇತುವೆ ರಾಷ್ಟ್ರಕ್ಕೆ ಸಮರ್ಪಣೆ
ಹೊಸದಿಲ್ಲಿ,ನ.4: ರಾಷ್ಟ್ರದ ರಾಜಧಾನಿ ದಿಲ್ಲಿಯ, ಹೊಸ ಹೆಗ್ಗುರುತೆನಿಸಿರುವ ‘ಸಿಗ್ನೇಚರ್ ಸೇತುವೆ’ ರವಿವಾರ ಉದ್ಘಾಟನೆಗೊಂಡಿತು. ದಿಲ್ಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಈ ಬೃಹತ್ ಸೇತುವೆಯನ್ನು ರಾಷ್ಟ್ರಕ್ಕೆ ಸಮರ್ಪಿಸಿದ್ದು, ನಾಳೆಯಿಂದ ಅದು ಸಾರ್ವಜನಿಕರಿಗೆ ಮುಕ್ತವಾಗಲಿದೆ.
675 ಮೀಟರ್ ಉದ್ದದ ಸಿಗ್ನೇಚರ್ ಸೇತುವೆಯನ್ನು ಯಮುನಾ ನದಿಗೆ ಅಡ್ಡವಾಗಿ ನಿರ್ಮಿಸಲಾಗಿದೆ. ಈ ಬೃಹತ್ ಸೇತುವೆಯಿಂದಾಗಿ ಉತ್ತರ ಹಾಗೂ ಈಶಾನ್ಯ ದಿಲ್ಲಿಯ ನಡುವಿನ ಪ್ರಯಾಣದ ಅವಧಿಯು ಕಡಿಮೆಯಾಗಲಿದೆ ಹಾಗೂ ವಜೀರಬಾದ್ ಸೇತುವೆಯಲ್ಲಿನ ಸಂಚಾರದಟ್ಟಣೆಯನ್ನು ಕಡಿಮೆಗೊಳಿಸಲಿದೆ. ಈ ಸೇತುವೆಯು ಯುಮುನಾ ನದಿಯ ಪಶ್ಚಿಮದಂಡೆಯ ಮೇಲಿನ ಬಾಹ್ಯ ರಿಂಗ್ ರಸ್ತೆಯನ್ನು, ಪೂರ್ವ ಬದಿಯಲ್ಲಿರುವ ವಜೀರಾಬಾದ್ ರಸ್ತೆಯೊಂದಿಗೆ ಸಂಪರ್ಕಿಸಲಿದೆ.
ಈ ಸೇತುವೆಯ ಮೂಲಕ ದಿಲ್ಲಿ ಮಹಾನಗರದ ವಿಹಂಗಮ ನೋಟವನ್ನು ವೀಕ್ಷಿಸಬಹುದಾಗಿದೆ. ಸೇತುವೆಗೆ ಅಳವಡಿಸಲಾದ ನಾಲ್ಕು ಎಲಿವೇಟರ್‌ಗಳು ಏಕಕಾಲಕ್ಕೆ 50 ಮಂದಿಯನ್ನು ಸೇತುವೆಯ ಮೇಲೆಗೆ ಕೊಂಡೊಯ್ಯಬಲ್ಲದು. ಈ ಎಲವೇಟರ್‌ಗಳು ಮುಂದಿನ ಎರಡು ತಿಂಗಳುಗಳೊಳಗೆ ಕಾರ್ಯಾಚರಿಸಲಿವೆಯೆಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮುಂಬರುವ ದಿನಗಳಲ್ಲಿ ಈ ಸೇತುವೆಯು ನಗರದ ಪ್ರವಾಸಿತಾಣವಾಗಲಿದೆ. ಸೇತುವೆಗೆ ಅಳವಡಿಸಲಾದ 154 ಮೀಟರ್ ಎತ್ತರದವರೆಗೆ ಗಾಜಿನ ಪೆಟ್ಟಿಗೆಯಲ್ಲಿ ನಿಂತುಕೊಂಡು ನೋಡಿದಲ್ಲಿ ಇಡೀ ದಿಲ್ಲಿ ಮಹಾನಗರದ ವಿಹಂಗಮ ನೋಟವನ್ನು ಕಾಣಬಹುದಾಗಿದೆಯೆಂದು ದಿಲ್ಲಿ ಉಪಮುಖ್ಯಮಂತ್ರಿ ಮನೀಶ್ ಸಿಸೋಡಿಯಾ ತಿಳಿಸಿದ್ದಾರೆ.
1594 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಈ ಸೇತುವೆಯ ನಿರ್ಮಾಣವು ಎಎಪಿ ಸರಕಾರಕ್ಕೆ ಒಂದು ದೊಡ್ಡ ಸವಾಲಾಗಿತ್ತೆಂದು ಅವರು ಹೇಳಿದರು. ಸೇತುವೆಯ ನಿರ್ಮಾಣ ಕಾಮಗಾರಿಯ ವೇಳೆ ಬಿಜೆಪಿಯು ಹಲವಾರು ಅಡೆತಡೆಗಳನ್ನುಂಟು ಮಾಡಿತ್ತು. ಅದಕ್ಷ ಅಧಿಕಾರಿಗಳನ್ನು ನೇಮಿಸಿತ್ತು ಮತ್ತು ಪ್ರಾಮಾಣಿಕ ಅಧಿಕಾರಿಗಳಿಗೆ ಬೆದರಿಕೆಯೊಡ್ಡಿತ್ತು ಎಂದು ಆರೋಪಿಸಿದರು.
1997ರಲ್ಲಿ ವಜೀರಾಬಾದ್ ಸೇತುವೆಯಿಂದ ಶಾಲಾ ಬಸ್ಸೊಂದು ಸೇತುವೆಗೆ ಉರುಳಿಬಿದ್ದು, 22 ಮಂದಿ ಮಕ್ಕಳು ಮೃತಪಟ್ಟ ಘಟನೆಯ ಬಳಿಕ ಈ ಸೇತುವೆಯ ನಿರ್ಮಾಣಕ್ಕೆ ಅನುಮೋದನೆ ದೊರೆತಿತ್ತು.