ದಿಲ್ಲಿ ಸಿಗ್ನೇಚರ್ ಸೇತುವೆ ಉದ್ಘಾಟನೆ: ಆಪ್ ಕಾರ್ಯಕರ್ತರ ಜೊತೆ ಘರ್ಷಣೆಗಿಳಿದ ಬಿಜೆಪಿ ಸಂಸದ

Update: 2018-11-04 18:02 GMT

ಹೊಸದಿಲ್ಲಿ,ನ.4: ಉದ್ಘಾಟನಾ ಸಮಾರಂಭಕ್ಕೆ ಆಹ್ವಾನವಿಲ್ಲದಿದ್ದ ದಿಲ್ಲಿ ಬಿಜೆಪಿ ಘಟಕದ ವರಿಷ್ಠ ಮನೋಜ ತಿವಾರಿ ಸ್ಥಳಕ್ಕೆ ಆಗಮಿಸಿ ಆಪ್ ಕಾರ್ಯಕರ್ತರೊಂದಿಗೆ ಘರ್ಷಣೆಗಿಳಿಯುವುದರೊಂದಿಗೆ ಇಲ್ಲಿಯ ನೂತನ ಸಿಗ್ನೇಚರ್ ಸೇತುವೆಯ ನಿರ್ಮಾಣದ ಹೆಗ್ಗಳಿಕೆಯ ಬಗ್ಗೆ ಬಿಜೆಪಿ ಮತ್ತು ಆಪ್ ನಡುವಿನ ಹಗ್ಗ ಜಗ್ಗಾಟ ರವಿವಾರ ತಾರಕಕ್ಕೇರಿದೆ. ದಿಲ್ಲಿ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಸಂಜೆ ನೂತನ ಸೇತುವೆಯನ್ನು ಉದ್ಘಾಟಿಸಿದರು.

ಉತ್ತರ ಮತ್ತು ಈಶಾನ್ಯ ದಿಲ್ಲಿ ನಡುವೆ ಸುಗಮ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸುವ ಸೇತುವೆ ನಿರ್ಮಾಣದ ಪುನರಾರಂಭದ ಹೆಗ್ಗಳಿಕೆ ತನ್ನ ಪಕ್ಷಕ್ಕೆ ದೊರೆಯಬೇಕೆಂದು ಪ್ರತಿಪಾದಿಸಿದ ತಿವಾರಿ,ತಾನು ಈಶಾನ್ಯ ದಿಲ್ಲಿಯ ಸಂಸದನಾಗಿದ್ದರೂ ತನ್ನನ್ನು ಉದ್ಘಾಟನಾ ಸಮಾರಂಭಕ್ಕೆ ಆಹ್ವಾನಿಸಿಲ್ಲ. ಸಮಾರಂಭ ತನ್ನ ಕ್ಷೇತ್ರದಲ್ಲಿ ನಡೆಯುತ್ತಿದೆ. ಹಲವಾರು ವರ್ಷಗಳ ಕಾಲ ಸ್ಥಗಿತಗೊಂಡಿದ್ದ ಸೇತುವೆಯ ಮರುನಿರ್ಮಾಣಕ್ಕೆ ತಾನು ಚಾಲನೆ ನೀಡಿದ್ದೆ ಮತ್ತು ಈಗ ಕೇಜ್ರಿವಾಲ್ ಉದ್ಘಾಟನಾ ಸಮಾರಂಭ ಆಯೋಜಿಸಿದ್ದಾರೆ ಎಂದರು.

ಬಿಜೆಪಿ ಮತ್ತುಆಪ್ ಕಾರ್ಯಕರ್ತರ ನಡುವೆ ಘರ್ಷಣೆಯ ಹಿನ್ನೆಲೆಯಲ್ಲಿ ಪೊಲೀಸರು ತಿವಾರಿ ಅವರನ್ನು ತಮ್ಮ ಬೆಂಗಾವಲಿನಲ್ಲಿ ಅಲ್ಲಿಂದ ದೂರ ಕರೆದೊಯ್ದರು. ಆಪ್ ಮತ್ತು ಪೊಲೀಸರು ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ತಿವಾರಿ ದೂರಿದರು.

ತಿವಾರಿ ಹೇಳಿಕೆಗೆ ತಿರುಗೇಟು ನೀಡಿದ ಆಪ್ ನಾಯಕ ದಿಲೀಪ ಪಾಂಡೆ, ವಾಸ್ತವದಲ್ಲಿ ಬಿಜೆಪಿ ಕಾರ್ಯಕರ್ತರೇ ಆಪ್ ಕಾರ್ಯಕರ್ತರನ್ನು ಮತ್ತು ಸ್ಥಳೀಯರನ್ನು ಥಳಿಸಿದ್ದಾರೆ. ತಿವಾರಿ ಗೂಂಡಾಗಿರಿ ಪ್ರದರ್ಶಿಸುತ್ತಿದ್ದಾರೆ ಎಂದು ಆರೋಪಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News