ಅಲ್ ಜುಬೈಲ್‌ನಲ್ಲಿ ಸಂಕಷ್ಟಕ್ಕೆ ಸಿಲುಕಿದ್ದ ಮೂಡುಬಿದಿರೆಯ ನಾಗರಾಜ್‌ಗೆ ಮುಕ್ತಿ

Update: 2018-11-05 09:03 GMT

ಮಂಗಳೂರು, ನ.5: ಸೌದಿ ಅರೇಬಿಯಾದ ಅಲ್ ಜುಬೈಲ್‌ನಲ್ಲಿ ಔದ್ಯೋಗಿಕ ಸಂಕಷ್ಟಕ್ಕೆ ಸಿಲುಕಿ ಒದ್ದಾಡುತ್ತಿದ್ದ ಮೂಡುಬಿದಿರೆ ಸಮೀಪದ ಪುತ್ತಿಗೆ ಗ್ರಾಮದ ನಾಗರಾಜ್(28) ಎಂಬವರು ಇಂಡಿಯನ್ ಸೋಶಿಯಲ್ ಫೋರಂ(ಐಎಸ್‌ಎಫ್)ನ ಸಕಾಲಿಕ ಸಹಾಯದಿಂದ ಊರು ತಲುಪುವಂತಾಗಿದೆ.

ಶನಿವಾರ ದಮ್ಮಾಮ್‌ನಿಂದ ತಾಯ್ನಾಡಿಗೆ ಮರಳಿರುವ ನಾಗರಾಜ್ ಇದೀಗ ಮುಂಬೈಯಲ್ಲಿದ್ದು, ಅಲ್ಲಿಂದ ರೈಲು ಮೂಲಕ ಮಂಗಳೂರಿಗೆ ಆಗಮಿಸಲು ಸಿದ್ಧತೆ ನಡೆಸಿದ್ದಾರೆ.

ಮೂಡುಬಿದಿರೆ ಸಮೀಪದ ಪುತ್ತಿಗೆ ಗ್ರಾಮದ ಪುತ್ತಿಗೆ ಗ್ರಾಮದ ಕಾರ್ಮುಂಡು ನಿವಾಸಿ ಮೋನಪ್ಪ-ಗಂಗಾವತಿ ದಂಪತಿಯ ಏಕೈಕ ಪುತ್ರ ನಾಗರಾಜ್ ಮಂಗಳೂರಿನ ಟೂರ್ಸ್‌ ಆ್ಯಂಡ್ ಟ್ರಾವೆಲ್ ಏಜನ್ಸಿಯೊಂದರಲ್ಲಿ ಉದ್ಯೋಗ ಸಂದರ್ಶನ ಎದುರಿಸಿದ್ದರು. ಬಳಿಕ ಕೈಗಾರಿಕಾ ಇಲೆಕ್ಟ್ರಿಶಿಯನ್ ನೇಮಕಾತಿ ಪತ್ರ ಪಡೆದು ಏಜನ್ಸಿಗೆ ಸಾವಿರಾರು ರೂ. ಪಾವತಿಸಿ 2018ರ ಜುಲೈ 23ರಂದು ಸೌದಿ ಅರೇಬಿಯಾದ ಜುಬೈಲ್ ಕೈಗಾರಿಕಾ ಪ್ರದೇಶಕ್ಕೆ ತೆರಳಿದ್ದರು. ನಾಗರಾಜ್‌ರನ್ನು ಕೆಲಸಕ್ಕೆ ಸೇರಿಸಿಕೊಂಡ ಕಂಪೆನಿಯು ಇಲೆಕ್ಟ್ರಿಷಿಯನ್ ಕೆಲಸದೊಂದಿಗೆ ಮರಳುಗಾಡಿನ ಖರ್ಜೂರದ ತೋಟವೊಂದರಲ್ಲಿ ಇತರ ಕೆಲಸ ಮಾಡಿಸಲು ಸೂಚಿಸಿತ್ತು. ಈ ಕೆಲಸ ತಿಳಿದಿಲ್ಲವೆಂದರೂ ಕೇಳಿಸಿಕೊಳ್ಳದ ಕಂಪೆನಿ ಅವರನ್ನು ತೋಟದಲ್ಲಿ ದುಡಿಸಲಾರಂಭಿಸಿತ್ತು. ಈ ಮಧ್ಯೆ ನಾಗರಾಜ್‌ಗೆ ಸರಿಯಾದ ವಸತಿ, ಊಟವೂ ಸಿಗುತ್ತಿರಲಿಲ್ಲ. ಇದರಿಂದ ಕಂಗಾಲಾದ ನಾಗರಾಜ್ ತಾನು ಸಂಕಷ್ಟದಲ್ಲಿರುವುದನ್ನು ಮನೆಯವರ ಗಮನಕ್ಕೆ ತಂದು ಏಜೆನ್ಸಿ ತನಗೆ ವಂಚನೆ ಮಾಡಿರುವುದಾಗಿ ತಿಳಿಸಿದರು. ಮಗನ ಮಾತು ಕೇಳಿ ಅಧೀರರಾದ ಹೆತ್ತವರು ಏಜನ್ಸಿ ಮೂಲಕ ಮಗನನ್ನು ಮರಳಿ ಕಳುಹಿಸುವಂತೆ ಮನವಿ ಮಾಡಿದರೂ ಪ್ರಯೋಜನವಾಗಲಿಲ್ಲ. ಒತ್ತಡ ಅತಿಯಾದಾಗ ಮರಳಿ ಕಳುಹಿಸಲು 9,000 ಸೌದಿ ರಿಯಲ್ ಅಂದರೆ 1.75 ಲಕ್ಷ ರೂ. ಬೇಡಿಕೆಯನ್ನು ಟ್ರಾವೆಲ್ ಏಜನ್ಸಿ ಮುಂದಿಟ್ಟಿತು. ಹಾಗೂ ಹೀಗೂ 1 ಲಕ್ಷ ರೂ. ನೀಡಿದರೂ ಏಜನ್ಸಿಯವರು ನಾಗರಾಜ್‌ನನ್ನು ವಾಪಸ್ ಕರೆಸಲು ಪ್ರಯತ್ನ ಮಾಡಲಿಲ್ಲ.

ನಾಗರಾಜ್‌ರ ಸಂಕಷ್ಟ ಅಲ್‌ಜುಬೈಲ್‌ನಲ್ಲಿರುವ ಐಎಸ್‌ಎಫ್ ಮುಖಂಡ ಹಸನ್ ಕಿನ್ನಿಗೋಳಿಯವರಿಗೆ ತಿಳಿಯುತ್ತದೆ. ತಕ್ಷಣ ಅವರು ಕಾರ್ಯಪ್ರವೃತ್ತರಾಗಿ ಇಮ್ತಿಯಾಝ್, ಕೈಝರ್ ಕಣ್ಣಂಗಾರ್, ಅಶ್ರಫ್ ಉಳ್ಳಾಲ್, ನೌಶಾದ್ ಕಾಟಿಪಳ್ಳ, ನೌಫಲ್ ಬಂದರ್‌ರ ಸಹಕಾರದೊಂದಿಗೆ ನಾಗರಾಜ್ ಕೆಲಸ ಮಾಡುವ ಕಂಪೆನಿಗೆ ಭೇಟಿ ನೀಡಿದರು. ವಾಸ್ತವ ಪರಿಸ್ಥಿತಿಯನ್ನು ಕಂಪೆನಿಯ ಮಾಲಕರಿಗೆ ತಿಳಿಸಿ ನಾಗರಾಜ್‌ರನ್ನು ತವರೂರಿಗೆ ಕಳುಹಿಸಿಕೊಡುವಲ್ಲಿ ಶ್ರಮಿಸಿದರು. ಹಾಗೇ ಏಜನ್ಸಿಗೆ ನೀಡಿದ್ದ 1 ಲಕ್ಷ ರೂ. ಮತ್ತು ಕೆಲಸ ಮಾಡಿದ ವೇತನವನ್ನು ಕೂಡಾ ಕಂಪೆನಿಯಿಂದ ನಾಗರಾಜ್‌ರಿಗೆ ಕೊಡಿಸಿದರು. ಅಲ್ಲದೆ ಸೌದಿ ಅರೇಬಿಯಾದಿಂದ ವಾಪಸ್ ಭಾರತಕ್ಕೆ ಮರಳುವ ಎಕ್ಸಿಟ್ ವೀಸಾದ ವ್ಯವಸ್ಥೆಯನ್ನು ಕಂಪೆನಿಯ ಮುಖಾಂತರ ಮಾಡಿಸುವಲ್ಲೂ ಹಸನ್ ಕಿನ್ನಿಗೋಳಿ ತಂಡವು ಯಶಸ್ವಿಯಾಗಿದೆ.

*ಇದೀಗ ಮುಂಬೈ ತಲುಪಿರುವ ನಾಗರಾಜ್ ಈ ಬಗ್ಗೆ ‘ವಾರ್ತಾಭಾರತಿ’ಯೊಂದಿಗೆ ಮಾತನಾಡಿ, ‘‘ಕುಟುಂಬಕ್ಕೆ ಆಸರೆಯಾಗುವ ಸಲುವಾಗಿ ಹಲವು ಕನಸಿನೊಂದಿಗೆ ಸೌದಿ ಅರೇಬಿಯಾಕ್ಕೆ ತೆರಳಿದ್ದೆ. ಇಲೆಕ್ಟ್ರಿಶಿಯನ್ ಆಗಿದ್ದ ನನಗೆ ಸಿಕ್ಕಿದ್ದು, ಖರ್ಜೂರದ ತೋಟದಲ್ಲಿ ವಾಹನ ಚಾಲನೆ, ಕೂಲಿ ಕೆಲಸ. ಇದು ಕಷ್ಟಕರವಾತ್ತು. ಅಲ್ಲಿಂದ ಮರಳಿ ಊರಿಗೆ ಹಿಂದಿರುಗಲು ಪ್ರಯತ್ನಿಸಿದರೂ ಸಾಧ್ಯವಾಗಲಿಲ್ಲ. ಕೊನೆಗೆ ನನಗೆ ಐಎಸ್‌ಎಫ್ ಸಂಘಟನೆಯ ಮುಖಂಡರು ನೆರವಿಗೆ ಧಾವಿಸಿದರು. ಅವರ ಸಹಕಾರದಿಂದ ನಾನು ಅಲ್ಲಿಂದ ಮುಕ್ತಿಪಡೆದು ಬಂದೆ. ಇಲ್ಲದಿದ್ದರೆ ನಾನಲ್ಲೇ ಜೀತದಾಳು ಆಗುವ ಸಾಧ್ಯತೆ ಇತ್ತು. ಐಎಸ್‌ಎಫ್ ಮುಖಂಡರ ಸಹಕಾರಕ್ಕೆ ಎಷ್ಟು ಕೃತಜ್ಞತೆ ಸಲ್ಲಿಸಿದರೂ ಸಾಲದು’’ ಧನ್ಯತಾಭಾವದಿಂದ ಎಂದರು.

ಎಸ್‌ಡಿಪಿಐ ಮುಲ್ಕಿ-ಮೂಡುಬಿದಿರೆ ಕ್ಷೇತ್ರದ ಕಾರ್ಯದರ್ಶಿ ಆಸಿಫ್ ಕೋಟೆಬಾಗಿಲು ನೇತೃತ್ವದ ತಂಡ ನಾಗರಾಜ್ ಮನೆಗೆ ಭೇಟಿ ನೀಡಿ ಧೈರ್ಯ ತುಂಬಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News