ಸ್ಥಾನಬದ್ಧತೆ ಕೇಂದ್ರಗಳಲ್ಲಿ ವಿದೇಶಿಯರನ್ನಿರಿಸಲು ಮಾರ್ಗಸೂಚಿ ರೂಪಿಸಲಾಗುತ್ತಿದೆ: ಸರಕಾರ
ಹೊಸದಿಲ್ಲಿ,ನ.5: ದೇಶಾದ್ಯಂತ ಸ್ಥಾನಬದ್ಧತೆ ಕೇಂದ್ರಗಳಲ್ಲಿ ವಿದೇಶಿ ಪ್ರಜೆಗಳನ್ನು ಇರಿಸುವುದಕ್ಕಾಗಿ ಮಾರ್ಗಸೂಚಿಗಳನ್ನು ರೂಪಿಸುವ ಕಾರ್ಯ ಪ್ರಗತಿಯಲ್ಲಿದೆ ಎಂದು ಕೇಂದ್ರ ಸರಕಾರವು ಸೋಮವಾರ ಸರ್ವೋಚ್ಚ ನ್ಯಾಯಾಲಯಕ್ಕೆ ತಿಳಿಸಿದೆ. ತನ್ಮಧ್ಯೆ ಈ ಸಂಬಂಧ ಕೆಲವು ಸುತ್ತೋಲೆಗಳನ್ನು ಅಸ್ಸಾಂ ರಾಜ್ಯಕ್ಕೆ ಹೊರಡಿಸಲಾಗಿದೆ ಎಂದೂ ಅದು ತಿಳಿಸಿತು.
ಸುತ್ತೋಲೆಗಳು ಅಥವಾ ಮಾರ್ಗಸೂಚಿಗಳಲ್ಲಿಯ ನಿರ್ದೇಶಗಳನ್ನು ಅಸ್ಸಾಂ ಸರಕಾರವು ಪಾಲಿಸುತ್ತಿದೆ ಎನ್ನುವುದನ್ನು ಖಚಿತಪಡಿಸಿಕೊಳ್ಳುವಂತೆ ನ್ಯಾ.ಎಂ.ಬಿ.ಲೋಕೂರ್ ನೇತೃತ್ವದ ಪೀಠವು ಸರಕಾರಕ್ಕೆ ಸೂಚಿಸಿತು.
ಸರ್ವೋಚ್ಚ ನ್ಯಾಯಾಲಯದಲ್ಲಿ ಅಸ್ಸಾಮಿನಲ್ಲಿಯ ಸ್ಥಾನಬದ್ಧತೆ ಕೇಂದ್ರಗಳ ಸ್ಥಿತಿಗೆ ಸಂಬಂಧಿಸಿದ ವಿಚಾರಣೆ ಸಂದರ್ಭ ವಿದೇಶಿ ಪ್ರಜೆಗಳನ್ನು ಇರಿಸಲು ಸ್ಥಾನಬದ್ಧತೆ ಕೈಪಿಡಿಯನ್ನು ರೂಪಿಸುವ ವಿಷಯ ಪ್ರಸ್ತಾವಗೊಂಡಿತ್ತು.
ಕೇಂದ್ರವು ಹೊರಡಿಸಿರುವ ಸುತ್ತೋಲೆಗಳನ್ನು ನಿಷ್ಠೆಯಿಂದ ಅನುಷ್ಠಾನಿಸಲು ರಾಜ್ಯವು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಿದೆ ಎಂದು ಅಸ್ಸಾಂ ಪರವಾಗಿ ಹಾಜರಿದ್ದ ಸಾಲಿಸಿಟರ್ ಜನರಲ್ ತುಷಾರ ಮೆಹ್ತಾ ಅವರು ಪೀಠಕ್ಕೆ ತಿಳಿಸಿದರು.
ಗೋಪಾಲಪುರದಲ್ಲಿ ನೂತನ ಸ್ಥಾನಬದ್ಧತೆ ಕೇಂದ್ರದ ನಿರ್ಮಾಣಕ್ಕಾಗಿ ಟೆಂಡರ್‌ಗಳನ್ನು ಆಹ್ವಾನಿಸಲಾಗಿದೆ ಮತ್ತು ಮುಂದಿನ ವರ್ಷದ ಆ.31ರೊಳಗೆ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆಯಿದೆ ಎಂದೂ ಅವರು ಹೇಳಿದರು.
47 ಘೋಷಿತ ವಿದೇಶಿ ಪ್ರಜೆಗಳು ಅಥವಾ ಅವರ ಕುಟುಂಬ ಸದಸ್ಯರಿದ್ದು,ಅವರನ್ನು ಪುನಃ ಒಗ್ಗೂಡಿಸಲು ವರ್ಗಾವಣೆಗೊಳಿಸುವ ಪ್ರಸ್ತಾವವಿದೆ ಮತ್ತು ವರ್ಗಾವಣೆಗೆ ಸುಮಾರು 15 ದಿನಗಳ ಕಾಲಾವಕಾಶ ಅಗತ್ಯವಿದೆ ಎಂದೂ ರಾಜ್ಯ ಸರಕಾರವು ತಿಳಿಸಿತು.
ಈ ಪೈಕಿ ಹೆಚ್ಚಿನವರು ಸಾಕಷ್ಟು ಸಮಯದಿಂದ ಪ್ರತ್ಯೇಕಗೊಂಡಿರುವುದರಿಂದ ಯಾವುದೇ ಸಕಾರಣವಿಲ್ಲದೆ ಅವರನ್ನು ಆ ಸ್ಥಿತಿಯಲ್ಲಿರಿಸುವುದು ಸೂಕ್ತವಲ್ಲ ಎಂದು ಹೇಳಿದ ಪೀಠವು,ಗರಿಷ್ಠ 10 ದಿನಗಳಲ್ಲಿ ವರ್ಗಾವಣೆ ಕಾರ್ಯವನ್ನು ಪೂರ್ಣಗೊಳಿಸುವಂತೆ ಅಸ್ಸಾಂ ಸರಕಾರಕ್ಕೆ ನಿರ್ದೇಶ ನೀಡಿತು.