ಅಡುಗೆಗೆ ಅಲ್ಯುಮಿನಿಯಂ ಪಾತ್ರೆಗಳನ್ನೇಕೆ ಬಳಸಬಾರದು ಎನ್ನುವುದಕ್ಕೆ ಕಾರಣಗಳಿಲ್ಲಿವೆ...

Update: 2018-11-05 15:06 GMT

ಆಹಾರದ ಆಯ್ಕೆ ನಮ್ಮ ಆರೋಗ್ಯಕ್ಕೆ ಮುಖ್ಯ ಎನ್ನುವುದು ಎಲ್ಲರಿಗೂ ಗೊತ್ತು, ಆದರೆ ಸೂಕ್ತ ಅಡುಗೆ ಪಾತ್ರೆಗಳ ಆಯ್ಕೆಯೂ ಅಷ್ಟೇ ಮಹತ್ವದ್ದು ಎನ್ನುವುದು ನಿಮಗೆ ಗೊತ್ತೇ?, ಇತ್ತೀಚಿನ ಅಧ್ಯಯನಗಳಂತೆ ಅಲ್ಯುಮಿನಿಯಂ ಪಾತ್ರೆಗಳಲ್ಲಿ ಆಹಾರವನ್ನು ತಯಾರಿಸುವುದರಿಂದ ಸುಮಾರು 1ರಿಂದ 2 ಎಂಜಿ ಅಲ್ಯುಮಿನಿಯಂ ನಮ್ಮ ಶರೀರವನ್ನು ಸೇರುತ್ತದೆ ಮತ್ತು ಇದು ಹಲವಾರು ಅರೋಗ್ಯ ಸಮಸ್ಯೆಗಳಿಗೆ ಕಾರಣವಾಗುತ್ತದೆ.

ಅಲ್ಯುಮಿನಿಯಂ ಪಾತ್ರೆಗಳು ಹಗುರ,ಅಗ್ಗ,ತುಕ್ಕು ನಿರೋಧಕವಾಗಿರುವುದರಿಂದ ಮತ್ತು ಸುಲಭವಾಗಿ ಲಭ್ಯವಿರುವುದರಿಂದ ನಾವು ಅವುಗಳನ್ನು ಬಳಸುತ್ತೇವೆ. ಅಲ್ಯುಮಿನಿಯಂ ಆಹಾರದಲ್ಲಿರುವ ವಿಟಾಮಿನ್‌ಗಳು ಮತ್ತು ಖನಿಜಗಳನ್ನು ಸಹ ತಟಸ್ಥಗೊಳಿಸುತ್ತದೆ. ದೀರ್ಘಾವಧಿಗೆ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯಿಂದ ಅಪಾಯ ಕಟ್ಟಿಟ್ಟ ಬುತ್ತಿಯಾಗಿದೆ. ಈ ಪಾತ್ರೆಗಳ ಬಳಕೆಯು ಕಾರಣವಾಗುವ ಆರೋಗ್ಯ ಸಮಸ್ಯೆಗಳ ಬಗ್ಗೆ ಮಾಹಿತಿಯಿಲ್ಲಿದೆ.....

ಆಹಾರದಲ್ಲಿ ಕರಗಿರುವ ಅಲ್ಯುಮಿನಿಯಂಗಿಂತ ಅಲ್ಯುಮಿನಿಯಂ ಹುಡಿಯ ಉಸಿರಾಟವು ಹೆಚ್ಚಿನ ಹಾನಿಯನ್ನುಂಟು ಮಾಡುತ್ತದೆ. ಅಲ್ಯುಮಿನಿಯಂ ಹುಡಿಯಿಂದ ಕಲುಷಿತಗೊಂಡಿರುವ ವಾತಾವರಣದಲ್ಲಿ ಸುದೀರ್ಘ ಕಾಲ ಕೆಲಸ ಮಾಡುವವರಲ್ಲಿ ಕೆಮ್ಮು ಕಾಣಿಸಿಕೊಳ್ಳುತ್ತದೆ ಮತ್ತು ಎದೆಯ ಸ್ವರೂಪವು ಸಾಮಾನ್ಯ ರೀತಿಯಲ್ಲಿರುವುದಿಲ್ಲ ಎಂದು ವರದಿಗಳು ತಿಳಿಸಿವೆ. ಅಲ್ಲದೆ ಮೂತ್ರಪಿಂಡ ಸಮಸ್ಯೆಯನ್ನು ಹೊಂದಿರುವವರಿಗೆ ಹೆಚ್ಚುವರಿ ಅಲ್ಯುಮಿನಿಯಂ ಅನ್ನು ತಮ್ಮ ಶರೀರದಿಂದ ಹೊರಗೆ ಹಾಕಲು ಸಾಧ್ಯವಾಗುವುದಿಲ್ಲ. ಇದರ ಪರಿಣಾಮವಾಗಿ ಅದು ಶರೀರದಲ್ಲಿಯೇ ಸಂಗ್ರಹಗೊಂಡು ಮೂಳೆ ಮತ್ತು ಮಿದುಳು ಕಾಯಿಲೆಗಳ ಅಪಾಯವನ್ನುಂಟು ಮಾಡುತ್ತದೆ. ಆದರೆ ಅಲ್ಯುಮಿನಿಯಂ ಕ್ಯಾನ್ಸರ್‌ಗೆ ಕಾರಣವಾಗುತ್ತದೆ ಎನ್ನುವುದು ಇನ್ನೂ ವೈಜ್ಞಾನಿಕವಾಗಿ ಸಿದ್ಧಗೊಂಡಿಲ್ಲ.

ಟೊಮೆಟೊದಂತಹ ಆಮ್ಲೀಯ ಆಹಾರಗಳನ್ನು ಅಲ್ಯುಮಿನಿಯಂ ಪಾತ್ರೆಗಳಲ್ಲಿ ಬೇಯಿಸುವುದನ್ನು ನಿವಾರಿಸುವ ಮೂಲಕ ಶರೀರವನ್ನು ಸೇರುವ ಅಲ್ಯುಮಿನಿಯಂ ಪ್ರಮಾಣವನ್ನು ಕನಿಷ್ಠಗೊಳಿಸಬಹುದಾಗಿದೆ. ಅಲ್ಲದೆ ಉಳಿದ ಆಹಾರವನ್ನು ಅಲ್ಯುಮಿನಿಯಂ ಪಾತ್ರಗಳಲ್ಲಿ ಇಡುವುದನ್ನಾಗಲೀ ಬಿಸಿಯಾದ ಆಹಾರವನ್ನು ಅಲ್ಯುಮಿನಿಯಂ ಫಾಯಿಲ್‌ಗಳಲ್ಲಿ ಸುತ್ತಿಡುವುದನ್ನಾಗಲೀ ಮಾಡಬೇಡಿ. ಹೀಗೆ ಮಾಡುವುದರಿಂದ ಆಹಾರವು ಸಣ್ಣಪ್ರಮಾಣಗಳಲ್ಲಿ ಅಲ್ಯುಮಿನಿಯಂ ಅನ್ನು ಹೀರಿಕೊಳ್ಳುತ್ತದೆ. ಹಳೆಯ ಅಲ್ಯುಮಿನಿಯಂ ಪಾತ್ರೆಗಳ ಬಳಕೆಯನ್ನು ನಿಲ್ಲಿಸಿ ಉತ್ತಮ ಪರ್ಯಾಯಗಳನ್ನು ಬಳಸುವುದು ಒಳ್ಳೆಯದು.

1970ರ ದಶಕದಲ್ಲಿ ಕೆನಡಾದ ವಿಜ್ಞಾನಿಗಳ ತಂಡವೊಂದು ನಡೆಸಿದ್ದ ಸಂಶೋಧನೆಯಲ್ಲಿ ಆಹಾರದಲ್ಲಿನ ಅಲ್ಯುಮಿನಿಯಂಗೂ ಅಲ್ಝೀಮರ್ಸ್ ಕಾಯಿಲೆಯುಂಟಾಗುವುದಕ್ಕೂ ಸಂಬಂಧವಿದೆ ಎನ್ನುವುದು ಸಾಬೀತಾಗಿದೆ. ಅಲ್ಝೀಮರ್ಸ್ ರೋಗಿಗಳ ಮಿದುಳಿನಲ್ಲಿ ಅಧಿಕ ಮಟ್ಟದಲ್ಲಿ ಅಲ್ಯುಮಿನಿಯಂ ಸಾಂದ್ರತೆ ಇರುವುದನ್ನು ವಿಜ್ಞಾನಿಗಳು ಕಂಡುಕೊಂಡಿದ್ದಾರೆ. ಅಲ್ಯುಮಿನಿಯಂ ಪಾತ್ರೆಗಳನ್ನು ಅಡಿಗೆಗೆ ಬಳಸುವುದರಿಂದಲೇ ಅಲ್ಝೀಮರ್ಸ್ ಕಾಯಿಲೆ ಉಂಟಾಗುತ್ತದೆ ಎನ್ನುವುದಕ್ಕೆ ಯಾವುದೇ ಪುರಾವೆ ಇಲ್ಲವಾದರೂ ಇಂತಹ ಪಾತ್ರೆಗಳಲ್ಲಿ ಅಡುಗೆ ಬೇಯಿಸುವುದು ಅಪೇಕ್ಷಣೀಯವಲ್ಲ.

ತಾಮ್ರ,ಕಬ್ಬಿಣ,ಆ್ಯನೋಡೈಸ್ಡ್ ಅಲ್ಯುಮಿನಿಯಂ,ಸ್ಟೇನ್‌ಲೆಸ್ ಸ್ಟೀಲ್,ಸಿರಾಮಿಕ್ ಅಥವಾ ಗಾಜಿನ ಪಾತ್ರೆಗಳು ಮಾರುಕಟ್ಟೆಗಳಲ್ಲಿ ಲಭ್ಯವಿರುವುದರಿಂದ ಅಡುಗೆ ಮನೆಯಲ್ಲಿ ಅಲ್ಯುಮಿನಿಯಂ ಪಾತ್ರೆಗಳನ್ನು ಬದಲಿಸುವುದು ಸಮಸ್ಯೆಯೇನಲ್ಲ. ಆದರೂ ತಾಮ್ರ ಮತ್ತು ಸ್ಟೇನ್‌ಲೆಸ್ ಸ್ಟೀಲ್ ಪಾತ್ರೆಗಳೂ ಲೋಹವನ್ನು ಆಹಾರಕ್ಕೆ ವರ್ಗಾವಣೆಗೊಳಿಸುವ ಅಪಾಯವನ್ನು ಹೊಂದಿರಬಹುದು. ಆ್ಯನೋಡೈಸ್ಡ್ ಅಲ್ಯುಮಿನಿಯಂ ಆಹಾರದಲ್ಲಿ ಕರಗಬಲ್ಲ ಅಲ್ಯುಮಿನಿಯಂ ಪ್ರಮಾಣವನ್ನು ತಗ್ಗಿಸಬಲ್ಲ ಕಠಿಣವಾದ ಲೇಪನವನ್ನು ಹೊಂದಿರುವುದರಿಂದ ಅದರಿಂದ ತಯಾರಾದ ಅಡಿಗೆ ಪಾತ್ರೆಗಳು ಒಳ್ಳೆಯ ಆಯ್ಕೆಯಾಗುತ್ತವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News