ದಣಿದು ನಿದ್ದೆ ಹೋದವಳು ಎಚ್ಚರಗೊಂಡ ಮೇಲೆ ಎರಡೂ ಕಾಲುಗಳನ್ನು ಕಳೆದುಕೊಂಡಳು

Update: 2018-11-05 15:53 GMT

ಜೀವನದಲ್ಲಿ ಒಮ್ಮೆ ಯಶಸ್ವಿಯಾದ ಬಳಿಕ ಹಿಂದಿರುಗಿ ನೋಡುವ ಸಂದರ್ಭವೇ ಬರುವುದಿಲ್ಲ ಎಂದು ನಾವು ಭಾವಿಸಿರುತ್ತೇವೆ. ಆದರೆ ಯಾವುದಾದರೂ ಅನಿರೀಕ್ಷಿತ ಆಕಸ್ಮಿಕಕ್ಕೆ ಗುರಿಯಾದ ಬಳಿಕ ನಮ್ಮ ಪರಿಪೂರ್ಣ ಬದುಕು ಕುಸಿದುಬಿದ್ದರೆ ಹೇಗಾಗಬಹುದು?

ಇಲ್ಲಿದೆ ಯಶಸ್ವಿ ಮಾಡೆಲ್‌ವೋರ್ವಳು ಟಾಕ್ಸಿಕ್ ಶಾಕ್ ಸಿಂಡ್ರೋಮ್ (ಟಿಎಸ್‌ಎಸ್)ನಿಂದ ಪೀಡಿತಳಾಗಿ ತನ್ನೆರಡೂ ಕಾಲುಗಳನ್ನು ಕಳೆದುಕೊಂಡ ಅಪರೂಪದಲ್ಲಿಯೇ ಅಪರೂಪವೆನ್ನಿಸುವ ಪ್ರಕರಣ. ಕಾಯಿಲೆಯಿಂದ ತನ್ನ ಒಂದಾದರೂ ಕಾಲನ್ನು ಉಳಿಸಿಕೊಳ್ಳುವ ಹೋರಾಟದಲ್ಲಿ ವಿಫಲಗೊಂಡ ಅಮೆರಿಕದ ಲಾಸ್ ಏಂಜೆಲ್ಸ್‌ನ ಮಾಡೆಲ್ ಲಾರೆನ್ ವಾಸೆರ್‌ಳ ವಿಲಕ್ಷಣ ಬದುಕಿನ ವಿವರಗಳಿಲ್ಲಿವೆ.

ಲಾರೆನ್ 2012ರಲ್ಲಿ ಮೊದಲಬಾರಿಗೆ ತನ್ನ ದುರಂತಕಥೆಯನ್ನು ಜಗತ್ತಿನೊಂದಿಗೆ ಹಂಚಿಕೊಳ್ಳುವ ಮೂಲಕ ಸುದ್ದಿಯಾಗಿದ್ದಳು. ಆಗ ಇನ್ನೂ 24ರ ಹರೆಯದಲ್ಲಿದ್ದ ಲಾರೆನ್ ಋತುಸ್ರಾವವನ್ನು ಹೀರಿಕೊಳ್ಳುವ ಪುಟ್ಟ ಸಾಧನ ಟಾಂಪನ್ ಸಂಬಂಧಿತ ಟಿಎಸ್‌ಎಸ್‌ನಿಂದ ಪೀಡಿತಳಾಗಿದ್ದಳು. ಆರಂಭದಲ್ಲಿ ಬಲಗಾಲು ಮತ್ತು ಎಡಗಾಲಿನ ಬೆರಳುಗಳನ್ನು ಕಳೆದುಕೊಂಡಿದ್ದ ಆಕೆ,ನಂತರದ ವರ್ಷಗಳಲ್ಲಿ ಇನ್ನೊಂದು ಕಾಲನ್ನೂ ಕಳೆದುಕೊಂಡಿದ್ದಾಳೆ.

  ಅದೊಂದು ದಿನ ಲಾರೆನ್ ಪಾಲಿಗೆ ಅತ್ಯಂತ ದುರದೃಷ್ಟಕರವಾಗಿತ್ತು. ಯಶಸ್ವಿ ಮಾಡೆಲ್ ಆಗಿದ್ದ ಆಕೆ ತುಂಬ ದಣಿದಿದ್ದಳು. ಹೀಗಾಗಿ ದಿನವಿಡೀ ತಾನು ಧರಿಸಿದ್ದ ಟಾಂಪನ್ ಅನ್ನು ತೆಗೆಯುವುದನ್ನು ಮರೆತು ನಿದ್ರಿಸಿದ್ದಳು. ಪರಿಣಾಮವಾಗಿ ಆಕೆಯ ಕಾಲು ಗ್ಯಾಂಗ್ರಿನ್‌ಗೆ ಗುರಿಯಾಗಿತ್ತು. ಮರುದಿನದಿಂದ ಅವಳನ್ನು ಒಂದೂವರೆ ವಾರ ಕಾಲ ವೈದ್ಯಕೀಯ ಕೋಮಾದಲ್ಲಿರಿಸಲಾಗಿತ್ತು. ಆಕೆಯ ಸ್ಥಿತಿ ಎಷ್ಟೊಂದು ಹದಗೆಟ್ಟಿತ್ತೆಂದರೆ ಒಂದೋ ಆಕೆ ತನ್ನ ಕಾಲನ್ನು ಕಳೆದುಕೊಳ್ಳಬೇಕಿತ್ತು ಇಲ್ಲವೇ ಜೀವವನ್ನೇ ಕಳೆದುಕೊಳ್ಳಬೇಕಿತ್ತು. ಇದನ್ನು ಆಕೆಗೆ ಸ್ಪಷ್ಟವಾಗಿ ತಿಳಿಸಿದ್ದ ವೈದ್ಯರು ಆಯ್ಕೆಯನ್ನು ಆಕೆಗೇ ಬಿಟ್ಟಿದ್ದರು.

ಆಸ್ಪತ್ರೆಯ ಹಾಸಿಗೆಯಲ್ಲಿ ಆಕೆ ಎಚ್ಚೆತ್ತಾಗ ಸೋಂಕು ಅದಾಗಲೇ ಆಕೆಯ ಇಡೀ ಶರೀರಕ್ಕೆ ಹರಡಿತ್ತು ಮತ್ತು ಶರೀರದಲ್ಲಿ ಸಂಗ್ರಹಗೊಂಡಿದ್ದ ಹೆಚ್ಚುವರಿ ನಂಜನ್ನು ಹೊರಹಾಕಲು ಅದು ಪ್ರಯತ್ನಿಸುತ್ತಿತ್ತು. ಹೀಗಾಗಿ ಆಕೆಯ ದೇಹತೂಕ ವಾಸ್ತವದಲ್ಲಿ ಇದ್ದಿದ್ದಕ್ಕಿಂತ 80 ಪೌಂಡ್‌ಗಳಷ್ಟು ಹೆಚ್ಚಾಗಿತ್ತು. ತನ್ನ ಒಂದು ಕಾಲನ್ನು ಆಕೆ ಕಳೆದುಕೊಳ್ಳಲೇಬೇಕಿತ್ತು ಮತ್ತು ಇನ್ನೊಂದು ಕಾಲನ್ನಾದರೂ ಉಳಿಸಿಕೊಳ್ಳಲು ಎಲ್ಲ ಪ್ರಯತ್ನಗಳನ್ನೂ ಮಾಡಿದ್ದಳು.

ತನ್ನ ಬಲಗಾಲನ್ನು ಕತ್ತರಿಸಲಾದ ಮೊದಲ ಶಸ್ತ್ರಚಿಕಿತ್ಸೆಯ ಕೆಲವು ತಿಂಗಳುಗಳ ಬಳಿಕ ಇನ್‌ಸ್ಟಾಗ್ರಾಮ್‌ನಲ್ಲಿ ಭಾವನಾತ್ಮಕ ಪೋಸ್ಟ್‌ವೊಂದನ್ನು ಹಂಚಿಕೊಂಡಿದ್ದ ಲಾರೆನ್,ತನ್ನ ನೋವು ಇನ್ನಷ್ಟು ಹೆಚ್ಚಾಗಿದೆ ಮತ್ತು ತನ್ನ ಎರಡನೇ ಕಾಲನ್ನೂ ವೈದ್ಯರು ಕತ್ತರಿಸುತ್ತಾರೆ ಎನ್ನುವುದು ತನಗೆ ಗೊತ್ತಾಗಿದೆ ಎಂದು ಹೇಳಿದ್ದಳು. ಅಂದ ಹಾಗೆ ಆಕೆಯ ಎಡಪಾದದಲ್ಲಿ ತೆರೆದ ಹುಣ್ಣೊಂದು ಆಗಿತ್ತು. ಏನು ಮಾಡಿದರೂ ಅದು ಗುಣವಾಗಿರಲಿಲ್ಲ ಮತ್ತು ಬೆರಳುಗಳೂ ಉಳಿದಿರಲಿಲ್ಲ. ಇದರಿಂದಾಗಿ ಆಕೆ ತೀವ್ರ ನೋವನ್ನು ಅನುಭವಿಸುತ್ತಿದ್ದಳು. ತನ್ನ ಕಾಲನ್ನು ರಕ್ಷಿಸಿಕೊಳ್ಳಲು ತಾನು ಮಾಡಬಹುದಾದ ಯಾವುದೂ ಉಳಿದಿಲ್ಲ ಎಂಬ ಷರಾದೊಂದಿಗೆ ಲಾರೆನ್ ತನ್ನ ಪೋಸ್ಟ್‌ನ್ನು ಅಂತ್ಯಗೊಳಿಸಿದ್ದಳು.

 ಕಳೆದ ವರ್ಷ ಲಾರೆನ್‌ಳ ಇನ್ನೊಂದು ಕಾಲನ್ನೂ ವೈದ್ಯರು ಕತ್ತರಿಸಿ ತೆಗೆದ ಬಳಿಕ ತನ್ನ ಎಲ್ಲ ನೋವು,ಕಳವಳಗಳಿಂದ ಮುಕ್ತಳಾಗಿರುವ ಆಕೆ ಕೃತಕ ಕಾಲುಗಳನ್ನು ಅಳವಡಿಸಿಕೊಂಡು ವಿವಿಧ ಏಜೆನ್ಸಿಗಳು ಮತ್ತು ಕಂಪನಿಗಳಿಗೆ ಮಾಡೆಲ್ ಆಗಿ ದುಡಿಯುತ್ತಿದ್ದಾಳೆ. ಟಿಎಸ್‌ಎಸ್ ಬಗ್ಗೆ ಮತ್ತು ಮಹಿಳೆಯರ ಮೇಲೆ ಟಾಂಪೂನ್‌ನ ದುಷ್ಪರಿಣಾಮಗಳ ಬಗೆ ಅರಿವು ಮೂಡಿಸಲು ಆಕೆ ತನ್ನ ಮಾಡೆಲಿಂಗ್ ವೇದಿಕೆಯನ್ನು ಬಳಸಿಕೊಳ್ಳುತ್ತಿದ್ದಾಳೆ.

ರಾಬಿನ್ ಡೇನಿಯಲ್ಸನ್ ಕಾಯ್ದೆಯ ಹೆಸರಿನಲ್ಲಿ ಟಿಎಸ್‌ಎಸ್ ಕುರಿತು ಮಸೂದೆಯೊಂದನ್ನು ಅಂಗೀಕರಿಸುವಂತೆ ಅಮೆರಿಕ ಸರಕಾರದ ಮೇಲೆ ಒತ್ತಡ ಹೇರಲು ಅಭಿಯಾನವೊಂದನ್ನೂ ಲಾರೆನ್ ನಡೆಸುತ್ತಿದ್ದಾಳೆ. ತಾನು ಅನುಭವಿಸಿದ್ದ ಸ್ಥಿತಿಯ ಬಗ್ಗೆ ಜನರಲ್ಲಿ ಅರಿವು ಮೂಡಿಸುವುದು ಈ ಕಾಯ್ದೆ ರಚನೆಯ ಹಿಂದಿನ ಆಕೆಯ ಉದ್ದೇಶವಾಗಿದೆ.1998ರಲ್ಲಿ ಟಿಎಸ್‌ಎಸ್‌ನಿಂದ ಸಾವನ್ನಪ್ಪಿದ್ದ ಮಹಿಳೆಯ ಹೆಸರನ್ನೇ ಆಕೆ ಈ ಮಸೂದೆಗೆ ಇರಿಸಿದ್ದಾಳೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News