ಮಧ್ಯ ಪ್ರದೇಶದ ಬಿಜೆಪಿ ಅಭ್ಯರ್ಥಿ ನಿಧನ

Update: 2018-11-05 16:08 GMT

ಬರ್ವಾನಿ,ನ.5: ನ.28ರಂದು ನಡೆಯಲಿರುವ ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯಲ್ಲಿ ಬರ್ವಾನಿ ಜಿಲ್ಲೆಯ ರಾಜಪುರ ವಿಧಾನಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿದ್ದ ಮಾಜಿ ಸಚಿವ ದೇವಿಸಿಂಗ್ ಪಟೇಲ್ (66) ಅವರು ಸೋಮವಾರ ಬೆಳಿಗ್ಗೆ ಹೃದಯ ಸ್ತಂಭನದಿಂದಾಗಿ ನಿಧನರಾಗಿದ್ದಾರೆ. ಅವರು ಪತ್ನಿ ಮತ್ತು ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಕೆಲ ಸಮಯದ ಹಿಂದೆ ಹೃದಯಾಘಾತಕ್ಕೊಳಗಾಗಿ ಚೇತರಿಸಿಕೊಂಡಿದ್ದ ಸಿಂಗ್ ಬೆಳಿಗ್ಗೆ ಎದೆನೋವಿನ ಬಗ್ಗೆ ತಿಳಿಸಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿತ್ತಾದರೂ ಚಿಕಿತ್ಸೆ ಫಲಕಾರಿಯಾಗದೆ ಕೊನೆಯುಸಿರೆಳೆದರು ಎಂದು ಬಿಜೆಪಿ ನಾಯಕ ಮತ್ತು ಸಿಂಗ್ ಅವರ ನಿಕಟವರ್ತಿ ಓಂ ಸೋನಿ ತಿಳಿಸಿದರು.

ಬಿಜೆಪಿ ನ.2ರಂದು ಪ್ರಕಟಿಸಿದ್ದ ತನ್ನ ಮೊದಲ ಪಟ್ಟಿಯಲ್ಲಿ ಸಿಂಗ್ ಅವರನ್ನು ರಾಜಪುರ(ಎಸ್‌ಟಿ) ವಿಧಾನಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಘೋಷಿಸಿತ್ತು.

ಮಾಜಿ ಮುಖ್ಯಮಂತ್ರಿ ಉಮಾ ಭಾರತಿ ಅವರ ಸಂಪುಟದಲ್ಲಿ ಸಚಿವರಾಗಿದ್ದ ಸಿಂಗ್ 1990ರಲ್ಲಿ ವಿಧಾನಸಭೆಯನ್ನು ಪ್ರವೇಶಿಸಿದ್ದರು. ರಾಜಪುರ ಕ್ಷೇತ್ರದಿಂದ 1998,2003 ಮತ್ತು 2008ರಲ್ಲಿ ಸತತ ಜಯ ದಾಖಲಿಸಿದ್ದ ಅವರು 2013ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಬಾಲ ಬಚ್ಚನ್ ಅವರಿಂದ ಪರಾಜಿತರಾಗಿದ್ದರು. ಬಚ್ಚನ್ ಹಾಲಿ ಚುನಾವಣೆಯಲ್ಲಿ ರಾಜಪುರ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News