×
Ad

ಕೋಲ್ಕತಾದಲ್ಲಿ ಕಾಳಿಪೂಜೆ ಪೆಂಡಾಲ್‌ಗೆ ಮಹಿಳೆಯರಿಗೆ ಪ್ರವೇಶವಿಲ್ಲ: ಪ್ರತಿಭಟನೆ ಆರಂಭ

Update: 2018-11-05 21:55 IST

ಕೋಲ್ಕತಾ, ನ.5: ಕೇರಳದ ಶಬರಿಮಲೆ ದೇವಸ್ಥಾನದಂತೆಯೇ, ಪಶ್ಚಿಮ ಬಂಗಾಳದ ಕೋಲ್ಕತಾದಲ್ಲಿರುವ ಕಾಳಿ ದೇವಸ್ಥಾನದ ಪೆಂಡಾಲ್‌ಗೂ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗುತ್ತಿದ್ದು, ಈ ಬಗ್ಗೆ ಇದೀಗ ಪ್ರತಿಭಟನೆ ಆರಂಭವಾಗಿದೆ.

ಪ.ಬಂಗಾಳದ ಬೀರ್‌ಭೂಮ್ ಜಿಲ್ಲೆಯಲ್ಲಿರುವ ಕಾಳಿ ದೇವಸ್ಥಾನದಲ್ಲಿ ಕಾಳಿಯ ವಿಗ್ರಹವನ್ನು 34 ವರ್ಷದ ಹಿಂದಿನಿಂದಲೂ ಸ್ಥಾಪಿಸಿ ಪೂಜಿಸಲಾಗುತ್ತಿದೆ. ಆದರೆ ಪೂಜೆ ನಡೆಯುವ ಪೆಂಡಾಲ್‌ಗೆ ಮಹಿಳೆಯರಿಗೆ ಪ್ರವೇಶ ನಿಷೇಧಿಸಲಾಗಿದೆ. ಪೂಜೆ ನಡೆಯುತ್ತಿರುವಾಗ ಪೆಂಡಾಲ್‌ಗೆ ಮಹಿಳೆಯರು ಪ್ರವೇಶಿಸಿದರೆ ನಮ್ಮ ಪ್ರದೇಶದಲ್ಲಿ ಏನಾದರೊಂದು ದುರಂತ ನಡೆಯುತ್ತದೆ ಎಂದು ಹೇಳಲಾಗುತ್ತಿದೆ. ಈ ಸಂಪ್ರದಾಯವನ್ನು ನಾವು ಮುರಿಯುವಂತಿಲ್ಲ ಎಂದು ದೇವಸ್ಥಾನದ ಪೂಜಾ ಸಮಿತಿಯ ಜಂಟಿ ಕಾರ್ಯದರ್ಶಿ ಸೈಬಲ್ ಗುಹಾ ತಿಳಿಸಿದ್ದಾರೆ.

ಕಾಳಿ ದೇವತೆಗೆ ಪೂಜಾ ಸಮಿತಿಯ ಪುರುಷ ಸದಸ್ಯರು ಹಾಗೂ ಸ್ಥಳೀಯರು ಸೇರಿಕೊಂಡು ನೈವೇದ್ಯ ಮತ್ತು ಪ್ರಸಾದ ತಯಾರಿಸುತ್ತಾರೆ. ಪೂಜಾ ಸಮಿತಿಯಲ್ಲಿ ಮಹಿಳಾ ಸದಸ್ಯರಿದ್ದಾರೆ. ಆದರೆ ಕಾಳಿ ದೇವಿ ಸಿಟ್ಟಾಗಬಹುದೆಂಬ ಕಾರಣಕ್ಕೆ ಅವರು ಪೆಂಡಾಲ್ ಪ್ರವೇಶಿಸಲು ಹಿಂಜರಿಯುತ್ತಾರೆ. ಪೆಂಡಾಲ್‌ವರೆಗೆ ಮೂರ್ತಿಯನ್ನು ತರುವ ಕಾರ್ಯ ಅಥವಾ ಮೂರ್ತಿಯ ಜಲಸ್ಥಂಭನ ಕಾರ್ಯದಲ್ಲಿ ಮಹಿಳೆಯರು ನೆರವಾಗುತ್ತಾರೆ ಎಂದು ಪೂಜಾ ಸಮಿತಿಯ ಮತ್ತೊಬ್ಬ ಸದಸ್ಯ ಸಾಹೇಬ್ ದಾಸ್ ಹೇಳಿದ್ದಾರೆ.

ಇಂತಹ ನಿಯಮ ಸ್ತ್ರೀದ್ವೇಷಿಯಾಗಿದ್ದು ಪುರುಷ ಪ್ರಧಾನ ವ್ಯವಸ್ಥೆಯ ಪರಾಕಾಷ್ಟೆಯಾಗಿದೆ ಎಂದು ಇತಿಹಾಸಜ್ಞೆ ನ್ರಿಸಿಂಗಪ್ರಸಾದ್ ಭಾದುರಿ ಖಂಡಿಸಿದ್ದಾರೆ. ಪೂಜೆಯ ಸಂದರ್ಭ ದೇವಸ್ಥಾನದೊಳಗೆ ಮಹಿಳೆಯರ ಪ್ರವೇಶವನ್ನು ನಿಷೇಧಿಸುವುದಾದರೆ ದೇವತೆಯನ್ನು ಆರಾಧಿಸುವುದೇಕೆ ಎಂದವರು ಪ್ರಶ್ನಿಸಿದ್ದಾರೆ. ಕಾಳಿದೇವಿಯ ಮೂರ್ತಿ ಪ್ರತಿಷ್ಠಾಪಿಸಿರುವ ನಿವೇಶನದ ಒಳಗೆ ಮಹಿಳೆಯರ ಪ್ರವೇಶಕ್ಕೆ ನಿಷೇಧವಿಲ್ಲ , ಪೆಂಡಾಲ್ ಪ್ರವೇಶಕ್ಕೆ ಮಾತ್ರ ನಿಷೇಧ ಎಂದು ಹಿರಿಯ ಅರ್ಚಕ ಶಂಭುನಾಥ ತಿಳಿಸಿದ್ದಾರೆ.

20 ವರ್ಷದ ಹಿಂದೆ ವಿವಾಹವಾಗಿ ಈ ಊರಿಗೆ ಬಂದಂದಿನಿಂದ ಇಂತಹ ಆಚರಣೆ ನಡೆದುಕೊಂಡು ಬರುತ್ತಿದೆ. ಈ ಸಂಪ್ರದಾಯ ಮುರಿಯಲು ನಾವು ಬಯಸುತ್ತಿಲ್ಲ ಎಂದು ಸ್ಥಳೀಯ ಮಹಿಳೆ ಸಬಿತಾ ದಾಸ್ ಎಂಬಾಕೆ ಪ್ರತಿಕ್ರಿಯಿಸಿದ್ದಾರೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News