ವೇಗದ ಹಿನ್ನೀರು ನೌಕಾಸೇವೆಗೆ ಚಾಲನೆ ನೀಡಿದ ಕೇರಳ
ತಿರುವನಂತಪುರಂ,ನ.5: ರಾಜ್ಯದ ಅತ್ಯಂತ ವೇಗದ ಹಿನ್ನೀರು ನೌಕಾಯಾನ ಸೇವೆ ‘ವೇಗಾ 120’ಯನ್ನು ಕೇರಳ ಸರಕಾರವು ಸೋಮವಾರ ಆರಂಭಿಸಿದೆ. ಈ ನೌಕಾಸೇವೆಯು ಎರ್ನಾಕುಲಂ, ಕೊಟ್ಟಾಯಂ ಹಾಗೂ ಅಲಪ್ಪುಳ ಜಿಲ್ಲೆಗಳನ್ನು ಸಂಪರ್ಕಿಸಲಿದೆ. ‘ತಾಸಿಗೆ 25 ಕಿ.ಮೀ.ವೇಗದಲ್ಲಿ ಸಂಚರಿಸುವ ಸಾಮರ್ಥ್ಯ ಹೊಂದಿರುವ ಈ ನೌಕೆಯು ಎರ್ನಾಕುಲಂ ಹಾಗೂ ವೈಕಂ ನಗರಗಳ ನಡುವಿನ ಪ್ರಯಾಣದ ಅವಧಿಯನ್ನು 90 ನಿಮಿಷಗಳಷ್ಟು ಕಡಿಮೆಗೊಳಿಸಲಿದೆ.
ಈತನಕ, ಕೇರಳದ ಹಿನ್ನೀರಿನಲ್ಲಿ ಕಾರ್ಯನಿರ್ವಹಿಸುವ ನೌಕೆಗಳು ತಾಸಿಗೆ ಗರಿಷ್ಠ 14 ಕಿ.ಮೀ. ವೇಗದವರೆಗೆ ಮಾತ್ರ ಸಂಚರಿಸುವ ಸಾಮರ್ಥ್ಯವನ್ನು ಪಡೆದಿವೆ. ಭಾಗಶಃ ಹವಾನಿಯಂತ್ರಿತವಾಗಿರುವ ಈ ನೌಕೆಯು ನದಿಮಾರ್ಗಗಳ ಮೂಲಕ ನಿತ್ಯವೂ ಸಂಚರಿಸುವ ಜನಸಾಮಾನ್ಯರಿಗೆ ಭಾರೀ ಪ್ರಯೋಜನಕಾರಿಯಾಗಿದೆ. ಈ ಫೆರ್ರಿ ನೌಕೆಯ ಸೇವೆಯು, ಫೀಡರ್ ದೋಣಿಗಳ ಮೂಲಕ ಇತರ ಪ್ರಮುಖ ಕೇಂದ್ರಗಳನ್ನು ಸಂಪರ್ಕಿಸಲಿದೆ.
ಕೇರಳ ಜಲ ಸಾರಿಗೆ ಇಲಾಖೆಯ ಮಾಲಕತ್ವದ ಈ ಫೆರ್ರಿ ನೌಕೆಯು ಹವಾನಿಯಂತ್ರಿತ ಕ್ಯಾಬಿನ್‌ನಲ್ಲಿ 40 ಮಂದಿ ಹಾಗೂ ಸಾಮಾನ್ಯ ಕ್ಯಾಬಿನ್‌ನಲ್ಲಿ 80 ಮಂದಿಯಂತೆ ಒಟ್ಟು 120 ಪ್ರಯಾಣಿಕರನ್ನು ಏಕಕಾಲದಲ್ಲಿ ಕೊಂಡೊಯ್ಯಬಲ್ಲದು.
‘ನವಗತಿ ಮೆರೈನ್ ಡಿಸೈನ್ ಆ್ಯಂಡ್ ಕನ್ಸ್‌ಟ್ರಕ್ಷನ್ ಏಜೆನ್ಸಿ ’ ನಿರ್ಮಿಸಿರುವ ಈ ನೌಕೆಯು ಅತ್ಯುತ್ಕೃಷ್ಟವಾದ ಸುರಕ್ಷತಾ ಮಾನದಂಡಗಳನ್ನು ಹೊಂದಿದೆ. ನೌಕೆಯು ಅಗ್ನಿನಿರೋಧಕ ವ್ಯವಸ್ಥೆಯಿಂದ ಸುಸಜ್ಜಿತವಾಗಿದ್ದು, ಎಂಜಿನ್ ಕೊಠಡಿಯು ಸಂಪೂರ್ಣವಾಗಿ ಇನ್ಸುಲೇಟೆಡ್‌ಯುಕ್ತವಾಗಿದೆ.ಯಾವುದೇ ಸಂಭಾವ್ಯ ಅಗ್ನಿಅನಾಹುತದಿಂ ರಕ್ಷಣೆ ಪಡೆಯಲು ಆದರ ಹೊರಹೊದಿಕೆ ಹಾಗೂ ಒಳಭಾಗದ ಮೇಲಂತಸ್ತಿಗೆ, ಅಗ್ನಿನಿರೋಧಕ ರೆಸಿನ್ ಲೇಪಿಸಲಾಗಿದೆ.
ಹಿನ್ನೀರ ದೋಣಿಯಾನಕ್ಕೆ ಹೆಸರುವಾಸಿಯಾಗಿರುವ ಕೇರಳದಲ್ಲಿ 41 ನದಿಗಳು ಪಶ್ಚಿಮಾಭಿಮುಖವಾಗಿ ಹರಿಯುತ್ತಿವೆ. 1895 ಕಿ.ಮೀ.ವರೆಗೂ ಹರಿಯುವ ಈ ನದಿಗಳು, ಕೇರಳದ ಒಳನಾಡಿನ ಸಾರಿಗೆ ವ್ಯವಸ್ಥೆಯ ಪ್ರಮುಖ ಭಾಗವಾಗಿ ಪರಿಣಮಿಸಿದೆ.
. ವಾಯು, ನೆಲ ಹಾಗೂ ಜಲ ಮಾರ್ಗಗಳನ್ನು ಪರಸ್ಪರ ಸಂಪರ್ಕಿಸುವ ತನ್ನ ಯೋಜನೆಯ ಅಂಗವಾಗಿ ಕೇರಳ ಸರಕಾರವು ಇತ್ತೀಚೆಗೆ ರಾಜ್ಯದ ಮೂರು ಅಂತಾರಾಷ್ಟ್ರೀಯ ವಿಮಾನನಿಲ್ದಾಣಗಳಿಗೆ ಜಲಮಾರ್ಗದ ನೇರ ಸಂಪರ್ಕವನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿತ್ತು.