ಕಾಶ್ಮೀರ: ಕಿಶ್ತ್‌ವಾರ್‌ನಲ್ಲಿ ಐದನೇ ದಿನಕ್ಕೆ ಕರ್ಫ್ಯೂ ಮುಂದುವರಿಕೆ
ಶ್ರೀನಗರ, ನ.5: ಹಿರಿಯ ಬಿಜೆಪಿ ಮುಖಂಡ ಹಾಗೂ ಅವರ ಸಹೋದರನನ್ನು ಜಮ್ಮು ಕಾಶ್ಮೀರದ ಕಿಶ್ತ್‌ವಾರ್ ನಗರದಲ್ಲಿ ಶಂಕಿತ ಉಗ್ರರು ಹತ್ಯೆ ಮಾಡಿದ ಬಳಿಕ ನಗರದಲ್ಲಿ ವಿಧಿಸಲಾಗಿದ್ದ ಕರ್ಫ್ಯೂ ಸತತ ಐದನೇ ದಿನವಾದ ಸೋಮವಾರವೂ ಮುಂದುವರಿದಿದೆ. ಜಿಲ್ಲೆಯಲ್ಲಿ ಶನಿವಾರ ಎರಡು ಗಂಟೆ ಹಾಗೂ ರವಿವಾರ ನಾಲ್ಕು ಗಂಟೆ ಕರ್ಫ್ಯೂ ಸಡಿಲಿಸಲಾಗಿತ್ತು.
ಕಿಶ್ತ್‌ವಾರ್‌ನಲ್ಲಿ ಪರಿಸ್ಥಿತಿ ನಿಧಾನಕ್ಕೆ ಸಹಜ ಸ್ಥಿತಿಗೆ ಮರಳುತ್ತಿದೆ. ಪರಿಸ್ಥಿತಿಯನ್ನು ಗಮನಿಸಿ ಕರ್ಫ್ಯೂ ಸಡಿಲಿಕೆ ಕುರಿತು ನಿರ್ಧರಿಸಲಾಗುವುದು ಎಂದು ಕಿಶ್ತ್‌ವಾರ್ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಈ ಮಧ್ಯೆ ಹೇಳಿಕೆ ನೀಡಿರುವ ಜಮ್ಮು ಕಾಶ್ಮೀರದ ರಾಜ್ಯಪಾಲ ಸತ್ಯಪಾಲ್ ಮಲಿಕ್, ಬಿಜೆಪಿ ಮುಖಂಡ ಅನಿಲ್ ಪರಿಹರ್ ಹಾಗೂ ಅವರ ಸಹೋದರನನ್ನು ಹತ್ಯೆಗೈದವರನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ. ಶನಿವಾರ ದೋಡ ಜಿಲ್ಲೆ, ಕಿಶ್ತ್‌ವಾರ್ ಜಿಲ್ಲೆಯ ಉಪವಿಭಾಗಗಳಾದ ಭದರ್‌ವಾ , ಪದ್ದರ್ ಹಾಗೂ ಚತ್ರೂ ಪ್ರದೇಶಗಲ್ಲಿ ಕರ್ಫ್ಯೂ ರದ್ದುಗೊಳಿಸಲಾಗಿದ್ದು ಮುಂಜಾಗರೂಕತಾ ಕ್ರಮವಾಗಿ ಇಲ್ಲಿ ಜಾರಿಗೊಳಿಸಿದ್ದ ಸೆಕ್ಷನ್ 144 ಮುಂದುವರಿಸಲಾಗಿದೆ . ಶನಿವಾರ ಜಮ್ಮು ಹಾಗೂ ಇತರ ಕೆಲವೆಡೆ ಇಂಟರ್‌ನೆಟ್ ಸೇವೆಯನ್ನು ಮರುಸ್ಥಾಪಿಸಲಾಗಿದೆ. ಕಿಶ್ತ್‌ವಾರ್‌ನಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಸೇನೆಯು ಧ್ವಜ ಮೆರವಣಿಗೆ ನಡೆಸಿದೆ ಎಂದು ಮೂಲಗಳು ತಿಳಿಸಿವೆ.