×
Ad

ದಿಲ್ಲಿಯ ಮಲಿನ ಗಾಳಿ ಸೇವನೆ ಮರಣಶಿಕ್ಷೆಗೆ ಸಮಾನ : ವೈದ್ಯರ ಹೇಳಿಕೆ

Update: 2018-11-05 23:48 IST

ಹೊಸದಿಲ್ಲಿ, ನ.5: ಹೊಗೆಮಂಜಿನಿಂದಾಗಿ ಪ್ರತೀ ವರ್ಷ ಒಂದು ಮಿಲಿಯಕ್ಕೂ ಅಧಿಕ ಭಾರತೀಯರು ಸಾಯುತ್ತಿದ್ದು ವಿಶ್ವದಲ್ಲಿ ಅತ್ಯಂತ ಕಳಪೆ ಗುಣಮಟ್ಟದ ಗಾಳಿ ಹೊಂದಿರುವ ಪ್ರಮುಖ ನಗರವಾಗಿ ದಿಲ್ಲಿ ಗುರುತಿಸಿಕೊಂಡಿದೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

     ಪ್ರತೀ ವರ್ಷದ ನವೆಂಬರ್ ತಿಂಗಳಲ್ಲಿ ಬೂದು ಬಣ್ಣದ ಹೊಗೆಮಂಜು ದಿಲ್ಲಿಯನ್ನು ಹೆಚ್ಚಿನ ಪ್ರಮಾಣದಲ್ಲಿ ಆವರಿಸಿಕೊಳ್ಳುತ್ತಿರುವ ಕಾರಣ ದಿಲ್ಲಿಯ ಬಹುತೇಕ ಆಸ್ಪತ್ರೆಗಳ ವಾರ್ಡ್‌ಗಳಲ್ಲಿ ಉಸಿರಾಟದ ಸಮಸ್ಯೆಯಿಂದ ಬಾಧಿತವಾಗಿರುವ ರೋಗಿಗಳ ಸಂಖ್ಯೆ ಹೆಚ್ಚಿರುತ್ತದೆ. ದೀಪಾವಳಿಯ ಹಬ್ಬದ ಸಂದರ್ಭ ವಾಹನಗಳ ಸಂಚಾರ ಅಧಿಕವಾಗಿರುವುದರಿಂದ ಹೆಚ್ಚಿನ ಪ್ರಮಾಣದಲ್ಲಿ ಹೊಗೆ ವಾತಾವರಣವನ್ನು ಸೇರಿಕೊಳ್ಳುತ್ತದೆ. ಇದಕ್ಕೆ ಪಟಾಕಿ ಹಚ್ಚುವುದರಿಂದ ಹೊರಬೀಳುವ ದಟ್ಟ ಹೊಗೆಯೂ ಸೇರಿಕೊಳ್ಳುತ್ತದೆ. ಅಲ್ಲದೆ ಅಕ್ಟೋಬರ್ ಅಂತ್ಯದಲ್ಲಿ ಪಂಜಾಬ್ ಮತ್ತು ಹರ್ಯಾಣ ರಾಜ್ಯಗಳಲ್ಲಿ ಬೆಳೆತ್ಯಾಜ್ಯ ಸುಡುವ ಕಾರಣ ಇಲ್ಲಿ ಉತ್ಪತ್ತಿಯಾಗುವ ಹೊಗೆ ದಿಲ್ಲಿಯತ್ತ ಸಾಗುತ್ತದೆ. ಕಟ್ಟಡ ನಿರ್ಮಾಣ ಕಾಮಗಾರಿಯ ಸಂದರ್ಭ ಉಂಟಾಗುವ ಧೂಳು ಕೂಡಾ ವಾತಾವರಣ ಸೇರಿಕೊಂಡು ದಿಲ್ಲಿಯಲ್ಲಿ ಗಾಳಿಯ ಗುಣಮಟ್ಟವನ್ನು ನಿಕೃಷ್ಟ ಸ್ಥಿತಿಗೆ ತಲುಪಿಸಿದೆ. ದಿಲ್ಲಿಯ ಮಲಿನ ಗಾಳಿ ಸೇವನೆ ಜನರಿಗೆ ಮರಣ ಶಿಕ್ಷೆಗೆ ಸಮಾನವಾಗಿದೆ ಎಂದು ವೈದ್ಯರು ಹೇಳಿದ್ದಾರೆ.

ದಿಲ್ಲಿಯ ಗಂಗಾರಾಮ್ ಆಸ್ಪತ್ರೆಯಲ್ಲಿ ಚಿಕಿತ್ಸೆಗೆಂದು ದಾಖಲಾಗಿದ್ದ ಯೋಗೇಶ್ ಕುಮಾರ್ ಎಂಬಾತ ಶಸ್ತ್ರಚಿಕಿತ್ಸೆಯ ಬಳಿಕ ಚೇತರಿಸಿಕೊಂಡಿದ್ದ. ಆದರೆ ಈತನನ್ನು ಈ ಸಂದರ್ಭ ಬಿಡುಗಡೆಗೊಳಿಸಿದರೆ ಆತನ ಆರೋಗ್ಯ ಮತ್ತೆ ಹದಗೆಡುವ ಅಪಾಯವಿದೆ ಎನ್ನುತ್ತಾರೆ ವೈದ್ಯರು. ಆಸ್ಪತ್ರೆಯ ಒಳಗಡೆ ಗಾಳಿಯ ಗುಣಮಟ್ಟವನ್ನು ಉತ್ತಮ ಸ್ಥಿತಿಯಲ್ಲಿ ಕಾಯ್ದುಕೊಳ್ಳಲಾಗಿದೆ. ಆದರೆ ಆಸ್ಪತ್ರೆಯಿಂದ ಹೊರಗೆ ಹೋದರೆ ಆತ ಮತ್ತೆ ಆರೋಗ್ಯದ ಸಮಸ್ಯೆಗೆ ಸಿಲುಕುವ ಸಾಧ್ಯತೆಯಿದೆ ಎಂದು ಆಸ್ಪತ್ರೆಯ ವೈದ್ಯ ಶ್ರೀನಿವಾಸ್ ಕೆ.ಗೋಪೀನಾಥ್ ಹೇಳಿದ್ದಾರೆ.

ದಿಲ್ಲಿಯಲ್ಲಿ ಈಗಿರುವ ಕಳಪೆ ಗುಣಮಟ್ಟದ ಗಾಳಿ ಫೆಬ್ರವರಿ ಅಂತ್ಯದ ಬಳಿಕ ಸುಧಾರಣೆಯಾಗುತ್ತದೆ. ಆದರೆ ಅದುವರೆಗೆ ಅಸ್ತಮಾ ಮುಂತಾದ ಉಸಿರಾಟದ ತೊಂದರೆಯಿರುವ ವ್ಯಕ್ತಿಗಳು ಗಂಭೀರ ಪರಿಣಾಮ ಎದುರಿಸಬೇಕಾಗುತ್ತದೆ ಎಂದು ವೈದ್ಯರು ತಿಳಿಸಿದ್ದಾರೆ. ಮಕ್ಕಳು ವಯಸ್ಕರಿಗಿಂತ ವೇಗವಾಗಿ ಉಸಿರಾಟ ನಡೆಸುತ್ತಾರೆ. ಇದರಿಂದ ಅವರು ವಯಸ್ಕರಿಗಿಂತ ದುಪ್ಪಟ್ಟು ಪ್ರಮಾಣದಲ್ಲಿ ವಿಷಕಾರಿ ಗಾಳಿಯನ್ನು ತಮ್ಮ ದೇಹದೊಳಗೆ ಎಳೆದುಕೊಳ್ಳುತ್ತಾರೆ. ಇದರಿಂದ ಪ್ರತೀ ವರ್ಷ ಸಾವಿರಾರು ಮಕ್ಕಳು ಸಾವಿಗೀಡಾಗುತ್ತಾರೆ ಎಂದು ವಿಶ್ವ ಆರೋಗ್ಯ ಸಂಸ್ಥೆ ತಿಳಿಸಿದೆ.

ದಿಲ್ಲಿಯಲ್ಲಿ ಜನಿಸಿದ ಮಗು ಮೊದಲ ದಿನ ಉಸಿರಾಡುವಾಗಲೇ ಸುಮಾರು 25 ಸಿಗರೇಟು ಸೇವನೆಯಿಂದ ದೇಹದೊಳಗೆ ಸೇರುವಷ್ಟು ಹೊಗೆಯನ್ನು ಒಳಗೆಳೆದುಕೊಳ್ಳುತ್ತದೆ ಎಂದು ಮತ್ತೊಬ್ಬ ವೈದ್ಯ ಡಾ ಅರವಿಂದ್ ಕುಮಾರ್ ಹೇಳುತ್ತಾರೆ. ಯುವಜನತೆಯ ಶ್ವಾಸಕೋಶದಲ್ಲೂ ಕಪ್ಪು ಕಲೆಗಳು ಕಂಡು ಬರುತ್ತಿದ್ದು ಇದು ಭಯಾನಕವಾಗಿದೆ ಎಂದವರು ಕಳವಳ ವ್ಯಕ್ತಪಡಿಸಿದ್ದಾರೆ. ಈ ಹಿನ್ನೆಲೆಯಲ್ಲಿ, ವಾಯು ಮಾಲಿನ್ಯದ ಅಪಾಯದ ಕುರಿತು ಜಾಗೃತಿ ಮೂಡಿಸಲು ಇದೀಗ ಪ್ರಯತ್ನಿಸಲಾಗುತ್ತಿದೆ ಮತ್ತು ವಾಯುಮಾಲಿನ್ಯ ನಿಯಂತ್ರಿಸಲು ಆಡಳಿತ ಕ್ರಮಗಳನ್ನು ಕೈಗೊಳ್ಳುತ್ತಿದೆ. ಆದರೆ ನಿರ್ಮಾಣ ಕಾಮಗಾರಿಯನ್ನು ನಿಷೇಧಿಸಿರುವುದು, ಸಾರಿಗೆ ದಟ್ಟಣೆಯನ್ನು ಕಡಿಮೆಗೊಳಿಸಲು ಸಮ-ಬೆಸ ಯೋಜನೆ, ಡೀಸೆಲ್ ಜನರೇಟರ್ ಬಳಕೆ ನಿಷೇಧ ಮುಂತಾದ ಕ್ರಮಗಳು ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News