ಬಿಹಾರ: 175 ಪೊಲೀಸ್ ಸಿಬ್ಬಂದಿ ವಜಾ

Update: 2018-11-05 18:29 GMT

ಮಹಿಳಾ ಕಾನ್ಸ್‌ಟೇಬಲ್ ನಿಧನದ ಬಳಿಕ ಪೊಲೀಸರಿಂದ ಹಿಂಸಾಚಾರ ಪ್ರಕರಣ

  ಪಾಟ್ನಾ,ನ.5: ಮಹಿಳಾ ಸಗೋದ್ಯೋಗಿಯೊಬ್ಬರ ಸಾವಿನ ಹಿನ್ನೆಲೆಯಲ್ಲಿ, ಪುಂಡಾಟಿಕೆ ಹಾಗೂ ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ಬಹುತೇಕ ಮಹಿಳಾ ಕಾನ್ಸ್‌ಟೇಬಲ್‌ಗಳು ಸೇರಿದಂತೆ ಸುಮಾರು 175 ಮಂದಿ ಪೊಲೀಸರನ್ನು ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ಬಿಹಾರದ ಉನ್ನತ ಪೊಲೀಸ್ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

 167 ಮಂದಿ ತರಬೇತಿನಿರತರು ಸೇರಿದಂತೆ ಒಟ್ಟು 175 ಮಂದಿ ಕಾನ್ಸ್‌ಟೇಬಲ್‌ಗಳನ್ನು ಸೇವೆಯಿಂದ ವಜಾಗೊಳಿಸಲಾಗಿದೆಯೆಂದು ಪಾಟ್ನಾ ವಲಯದ ಪೊಲೀಸ್ ಐಜಿಪಿ ನೈಯಾರ್ ಹಸ್ನೈನ್ ಖಾನ್ ತಿಳಿಸಿದ್ದಾರೆ.

 ವಜಾಗೊಂಡ ತರಬೇತಿ ನಿರತ ಕಾನ್ಸ್‌ಟೇಬಲ್‌ಗಳ ಪೈಕಿ ಸುಮಾರು ಅರ್ಧ ದಷ್ಟು ಮಂದಿ ಮಹಿಳೆಯರು. ಅಮಾನತುಗೊಂಡವರಲ್ಲಿ ಓರ್ವ ಹೆಡ್‌ಕಾನ್ಸ್‌ಟೇಬಲ್ ಹಾಗೂ ಇತರ ಇನ್ನಿಬ್ಬರು ಪೊಲೀಸ್ ಸಿಬ್ಬಂದಿ ಸೇರಿದ್ದಾರೆಂದು ಐಜಿಪಿ ತಿಳಿಸಿದ್ದಾರೆ.

        ಮೃತ ಕಾನ್ಸ್‌ಟೇಬಲ್‌ಳ ವೈದ್ಯಕೀಯ ಪರೀಕ್ಷೆಯನ್ನು ಸಮರ್ಪಕವಾಗಿ ನಡೆಸಲು ವಿಫಲರಾದ ವೈದ್ಯಕೀಯ ಅಧಿಕಾರಿಯ ವಿರುದ್ಧ ಪೊಲೀಸ್ ಆಸ್ಪತ್ರೆಯ ವೈದ್ಯಕೀಯ ಅಧಿಕಾರಿ ವಿರುದ್ಧ ಕ್ರಮ ಕೈಗೊಳ್ಳುವಂತೆ ತಾನು ಶಿಫಾರಸು ಮಾಡಿರುವುದಾಗಿ ಐಜಿಪಿ ತಿಳಿಸಿದ್ದಾರೆ. ಹಿಂಸಾಚಾರಕ್ಕಿಳಿದ ಪೊಲೀಸ್ ಸಿಬ್ಬಂದಿ, ಉಪಪೊಲೀಸ್ ಅಧೀಕ್ಷಕ ಮುಹಮ್ಮದ್ ಮಸಾಲುದ್ದೀನ್ ಅವರನ್ನು ಅವರ ನಿವಾಸದ ತನಕವೂ ಬೆನ್ನಟ್ಟಿದ್ದರಲ್ಲದೆ, ಅವರ ಮನೆಯನ್ನು ಕೊಳ್ಳೆಹೊಡೆಯಿತು ಮತ್ತು ಅವರ ಕುಟುಂಬದ ಸದಸ್ಯರ ಜೊತೆ ಅಸಭ್ಯವಾಗಿ ವರ್ತಿಸಿತೆಂದು ಖಾನ್ ತಿಳಿಸಿದ್ದಾರೆ.

ತೀವ್ರವಾದ ಹೊಟ್ಟೆನೋವಿನಿಂದ ಬಳಲುತ್ತಿದ್ದ ಮಹಿಳಾ ಪೊಲೀಸ್ ಸವಿತಾ ಪಾಠಕ್ (22), ಶುಕ್ರವಾರ ಮುಂಜಾನೆ ಕೊನೆಯುಸಿರೆಳೆದಿದ್ದರು. ಸವಿತಾ ಅವರ ಆರೋಗ್ಯ ಹದಗೆಟ್ಟಿದ್ದರೂ,ರಜೆ ನೀಡದೆ ಆಕೆಗೆ ಕರ್ತವ್ಯ ದಲ್ಲಿ ನಿಯೋಜಿಸಲಾಗಿತ್ತೆಂದು ಆಕ್ರೋಶ ವ್ಯಕ್ತಪಡಿಸಿದ್ದ ತರಬೇತಿ ನಿರತ ಪೊಲೀಸ್ ಕಾನ್ಸ್‌ಟೇಬಲ್‌ಗಳು ಹಿಂಸಾಚಾರಕ್ಕಿಳಿದಿದ್ದರು. ಪೊಲೀಸ್ ವಸತಿಬಡಾವಣೆಯಲ್ಲಿ ದಾಂಧಲೆ ನಡೆಸಿದ ಪ್ರತಿಭಟನಾನಿರತ ಸಿಬ್ಬಂದಿ ರಸ್ತೆಗಳಲ್ಲಿ ನಿಲ್ಲಿಸಲಾಗಿದ್ದ ಪೊಲೀಸ್ ಅಧಿಕಾರಿಗಳ ವಾಹನಗಳಿಗೆ ಬೆಂಕಿ ಹಚ್ಚಿದ್ದರು. ಗಲಭೆ ನಿರತರನ್ನು ನಿಯಂತ್ರಿಸಲು ಹಿರಿಯ ಪೊಲೀಸ್ ಅಧಿಕಾರಿಗಳೇ ಸ್ಥಳಕ್ಕೆ ಧಾವಿಸಿದ್ದರು. ಸುರಕ್ಷತಾ ಕವಚಗಳನ್ನು ಧರಿಸಿದ್ದ ಕಾರ್ಯಾಚರಣೆಗಿಳಿದ ಅವರಿಗೆ ಪರಿಸ್ಥಿತಿ ಹತೋಟಿಗೆ ತರಲು ಹಲವು ತಾಸುಗಳೇ ಬೇಕಾದವು.

 ಸವಿತಾ ಪಾಠಕ್ ಡೆಂಗ್‌ಜ್ವರದಿಂದಾಗಿ ಸಾವನ್ನಪ್ಪಿದ್ದಾರೆಂದು ಪೊಲೀಸ್ ಅಧಿಕಾರಿಗಳು ಆರಂಭದಲ್ಲಿ ತಿಳಿಸಿದ್ದರು. ಆದಾಗ್ಯೂ ಸವಿತಾಗೆ ಚಿಕಿತ್ಸೆ ನೀಡಿದ ಆಸ್ಪತ್ರೆಯು ಆನಂತರ ಹೇಳಿಕೆ ನೀಡಿ, ಆಕೆಗೆ ಡೆಂಗ್ ಜ್ವರದ ತಪಾಸಣೆಯನ್ನು ನಡೆಸಲಾಗಿಲ್ಲವೆಂದು ಸ್ಪಷ್ಟಪಡಿಸಿತ್ತು. ಆದರೆ ಆಕೆ ಒಂದು ಬಗೆಯ ವೈರಾಣು ಸೋಂಕಿನಿಂದ ಬಳಲುತ್ತಿದ್ದುದಾಗಿ ಅದು ತಿಳಿಸಿತ್ತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News