ಅಸ್ಸಾಂ: ಹಿರಿಯ ಐಪಿಎಸ್ ಅಧಿಕಾರಿ ವಿರುದ್ಧ 'ಮೀ ಟೂ' ಆರೋಪ

Update: 2018-11-06 03:09 GMT

ಗುವಾಹತಿ, ನ. 6: ದೇಶಾದ್ಯಂತ ಬಿರುಗಾಳಿ ಎಬ್ಬಿಸಿರುವ ಮೀ ಟೂ ಚಳವಳಿಯ ಅಬ್ಬರಕ್ಕೆ ಇದೀಗ ಅಸ್ಸಾಂನ ಹಿರಿಯ ಐಪಿಎಸ್ ಅಧಿಕಾರಿ ಸಿಕ್ಕಿಹಾಕಿಕೊಂಡಿದ್ದಾರೆ.

ರಾಜ್ಯ ಪೊಲೀಸ್ ಇಲಾಖೆಯ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಹೆಚ್ಚುವರಿ ಮಹಾನಿರ್ದೇಶಕ ಮುಕೇಶ್ ಅಗರ್‌ವಾಲ್ ವಿರುದ್ಧ ಮಜೂಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕಿ ಲೀನಾ ಡೋಲೆ ದೂರಿದ್ದಾರೆ.

"ಕೆಲಸದ ಸ್ಥಳದಲ್ಲಿ ಲೈಂಗಿಕ ಕಿರುಕುಳಕ್ಕೆ ಈಡಾಗಿದ್ದೇನೆ. 2012ರ ಮಾರ್ಚ್‌ನಲ್ಲಿ ಹಿರಿಯ ಅಧಿಕಾರಿ, ಲಾಜಿಸ್ಟಿಕ್ಸ್ ವಿಭಾಗದ ಐಜಿಪಿಯಾಗಿದ್ದ ಮುಖೇಶ್ ಅಗರ್‌ವಾಲ್, ನನ್ನ ಕಾರ್ಯದಕ್ಷತೆಯನ್ನು ಮೆಚ್ಚಿ ತಮ್ಮೊಂದಿಗೆ ರಜೆಯ ವಿಹಾರಕ್ಕೆ ಆಗಮಿಸುವಂತೆ ಕೋರಿದರು" ಎಂದು ಫೇಸ್‌ಬುಕ್ ಪೋಸ್ಟ್‌ನಲ್ಲಿ ವಿವರಿಸಿದ್ದಾರೆ.

ಇದನ್ನು ನಿರಾಕರಿಸಿ ಡಿಜಿಪಿಗೆ ಈ ಬಗ್ಗೆ ಮಾಹಿತಿ ನೀಡಿದ್ದಾಗಿಯೂ ಅವರು ಹೇಳಿದ್ದಾರೆ. ಅಗರ್‌ವಾಲ್ ವಿರುದ್ಧ ಲಿಖಿತ ದೂರು ನೀಡಿದ ಬಳಿಕ ಸಾಕಷ್ಟು ಬದಲಾವಣೆಗಳಾಗಿವೆ ಎಂದು ತಿಳಿಸಿದ್ದಾರೆ.

ಈ ದೂರು ದಾಖಲಾದ ಆರು ತಿಂಗಳ ಬಳಿಕ ಡೋಲೆಯವರ ಪತಿ ಆತ್ಮಹತ್ಯೆ ಮಾಡಿಕೊಂಡಿದ್ದರು. "ಈ ಘಟನೆ ಬಳಿಕ ತನಿಖಾಧಿಕಾರಿಯಾಗಿದ್ದ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಎಮಿಲಿ ಚೌಧರಿ ನನ್ನ ನಿವಾಸಕ್ಕೆ ಬಂದು, ನಿಮ್ಮ ಪತಿಯ ಆತ್ಮಹತ್ಯೆಗೆ ನೀವು ದೂರು ನೀಡಿರುವುದು ಕಾರಣವಲ್ಲ ಎಂದು ಹೇಳಿದ್ದರು"
ಆರೋಪಿ ಅಧಿಕಾರಿ ಇದನ್ನು ಒಪ್ಪಿಕೊಂಡಿದ್ದರೂ, ನನ್ನ ಪ್ರಕರಣದ ವಿಚಾರಣಾ ಪ್ರಕ್ರಿಯೆ ನಡೆಯಲಿಲ್ಲ. ಇದು ತಪ್ಪು ತಿಳಿವಳಿಕೆಯಿಂದ ಆದ ಪ್ರಮಾದ ಎಂಬ ಕಾರಣ ನೀಡಿ ಪ್ರಕರಣ ವಜಾ ಮಾಡಲಾಯಿತು ಎಂದು ವಿವರಿಸಿದ್ದಾರೆ.

"ಅಗರ್‌ವಾಲ್ ಅವರು ರಜಾವಿಹಾರಕ್ಕೆ ತಮ್ಮ ಜತೆ ಬರುವಂತೆ ಮತ್ತು ಈ ಬಗ್ಗೆ ಪತಿಗೆ ಮಾಹಿತಿ ನೀಡದಂತೆ ಹೇಳಿದ್ದರು. ಅವರ ಪತ್ನಿ ನನ್ನ ವಿರುದ್ಧ ಮಾನನಷ್ಟ ಮೊಕದ್ದಮೆಯನ್ನೂ ಹೂಡಿದ್ದರು" ಆ ಬಳಿಕ ಡೋಲೆ ಪರಾಮರ್ಶನಾ ಅರ್ಜಿಯನ್ನು ಗುವಾಹತಿ ಹೈಕೋರ್ಟ್‌ನಲ್ಲಿ ಸಲ್ಲಿಸಿ, ಪ್ರಕರಣ ಗೆದ್ದಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News