ದ್ವಿತೀಯ ಟ್ವೆಂಟಿ-20: ವಿಂಡೀಸ್ ಗೆಲುವಿಗೆ ಕಠಿಣ ಸವಾಲು
ಲಕ್ನೋ, ನ.6: ದ್ವಿತೀಯ ಟ್ವೆಂಟಿ-20 ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಭಾರತ ನಾಯಕ ರೋಹಿತ್ ಶರ್ಮಾ ಶತಕದ ನೆರವಿನಲ್ಲಿ ವೆಸ್ಟ್ ಇಂಡೀಸ್ ನ ಗೆಲುವಿಗೆ ಕಠಿಣ ಸವಾಲು ವಿಧಿಸಿದೆ.
‘ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಏಕಾನ ಕ್ರಿಕೆಟ್ ಸ್ಟೇಡಿಯಂನಲ್ಲಿ ಟಾಸ್ ಸೋತು ಬ್ಯಾಟಿಂಗ್ ಗೆ ಇಳಿಸಲ್ಪಟ್ಟ ಭಾರತ ನಿಗದಿತ 20 ಓವರ್ ಗಳಲ್ಲಿ 2 ವಿಕೆಟ್ ನಷ್ಟದಲ್ಲಿ 195 ರನ್ ಗಳಿಸಿದೆ.
ರೋಹಿತ್ ಶರ್ಮಾ ಔಟಾಗದೆ 111 ರನ್ (61ಎ, 8ಬೌ,7ಸಿ) ಮತ್ತು ಲೋಕೇಶ್ ರಾಹುಲ್ ಔಟಾಗದೆ 26 ರನ್ , ರಿಷಭ್ ಪಂತ್ 5 ರನ್ ಮತ್ತು ಶಿಖರ್ ಧವನ್ 43 ರನ್ (41ಎ, 3ಬೌ) ಗಳಿಸಿ ಔಟಾದರು.
ರೋಹಿತ್ ಶರ್ಮಾ 86ನೇ ಪಂದ್ಯದಲ್ಲಿ 58 ಎಸೆತಗಳಲ್ಲಿ 8 ಬೌಂಡರಿ ಮತ್ತು 6 ಸಿಕ್ಸರ್ ಸಹಾಯದಿಂದ 4ನೇ ಶತಕ ದಾಖಲಿಸಿದರು. ಇದರೊಂದಿಗೆ ಅಂತಾರಾಷ್ಟ್ರೀಯ ಟ್ವೆಂಟಿ-20 ಕ್ರಿಕೆಟ್‌ನಲ್ಲಿ ದಾಖಲೆಯ ನಾಲ್ಕನೇ ಶತಕ ಸಾಧನೆ ಮಾಡಿದ ವಿಶ್ವದ ಮೊತ್ತ ಮೊದಲ ಬ್ಯಾಟ್ಸ್‌ಮನ್ ಎಂಬ ಕೀರ್ತಿಗೆ ಪಾತ್ರವಾಗಿದ್ದಾರೆ. ಅತಿ ಹೆಚ್ಚು ಶತಕಗಳನ್ನು ದಾಖಲಿಸಿದ ಪಟ್ಟಿಯಲ್ಲಿ ನ್ಯೂಝಿಲೆಂಡ್‌ನ ಕಾಲಿನ್ ಮನ್ರೊ ದಾಖಲೆಯನ್ನು ಮುರಿದಿದ್ದಾರೆ. ಇದಕ್ಕೂ ಮೊದಲು ಅವರು 38 ಎಸೆತಗಳಲ್ಲಿ 3 ಬೌಂಡರಿ ಮತ್ತು 3 ಸಿಕ್ಸರ್ ಸಹಾಯದಿಂದ ಅರ್ಧಶತಕ ಪೂರ್ಣಗೊಳಿಸಿದ್ದರು.
ಇನಿಂಗ್ಸ್ ಆರಂಭಿಸಿದ ರೋಹಿತ್ ಮತ್ತು ಧವನ್ ಮೊದಲ ವಿಕೆಟ್ ಗೆ 14 ಓವರ್ ಗಳಲ್ಲಿ 123 ರನ್ ಗಳ ಜೊತೆಯಾಟ ನೀಡಿದರು. ಮೂರನೇ ವಿಕೆಟ್ ಗೆ ಲೋಕೇಶ್ ರಾಹುಲ್ ಜೊತೆ 62 ರನ್ ಗಳ ಜೊತೆಯಾಟ ನೀಡಿ ವಿಂಡೀಸ್ ಕಠಿಣ ಸವಾಲು ವಿಧಿಸಲು ನೆರವಾದರು.
ವಿಂಡೀಸ್ ಪರ ಖಾರಿ ಪಿಯರ್ 49ಕ್ಕೆ 1 ಮತ್ತು ಫ್ಯಾಬಿಯಾನ್ ಆಲನ್ 33ಕ್ಕೆ 1 ವಿಕೆಟ್ ಕಬಳಿಸಿದರು.