ಪಾಕ್ ಆಕ್ರಮಿತ ಕಾಶ್ಮೀರ ಮೂಲಕ ಪಾಕ್-ಚೀನಾ ಬಸ್‌ಗೆ ಚಾಲನೆ

Update: 2018-11-07 15:49 GMT

ಇಸ್ಲಾಮಾಬಾದ್, ನ. 7: ಭಾರತದ ಆಕ್ಷೇಪದ ಹೊರತಾಗಿಯೂ, ಲಾಹೋರ್‌ನಿಂದ ಚೀನಾದ ಕ್ಸಿನ್‌ಜಿಯಾಂಗ್ ಪ್ರಾಂತದ ಕಶ್ಗರ್ ನಗರಕ್ಕೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದುಹೋಗುವ ವಿಲಾಸಿ ಬಸ್ ಸೇವೆಗೆ ಚೀನಾ ಮತ್ತು ಪಾಕಿಸ್ತಾನಗಳು ಸೋಮವಾರ ಚಾಲನೆ ನೀಡಿವೆ.

ಪ್ರಯಾಣಿಕ ಬಸ್ ಸೋಮವಾರ ರಾತ್ರಿ ಲಾಹೋರ್‌ನ ಗುಲ್ಬರ್ಗ್‌ನಿಂದ ಕಶ್ಗರ್‌ಗೆ ತನ್ನ ಚೊಚ್ಚಲ ಯಾನವನ್ನು ಆರಂಭಿಸಿತು.

ಇದು 60 ಬಿಲಿಯ ಡಾಲರ್ ವೆಚ್ಚದ ಚೀನಾ-ಪಾಕಿಸ್ತಾನ ಆರ್ಥಿಕ ಕಾರಿಡಾರ್ (ಸಿಪಿಇಸಿ)ನಡಿ ರಸ್ತೆ ಮೂಲಕ ಉಭಯ ದೇಶಗಳನ್ನು ಸಂಪರ್ಕಿಸುವ ಯೋಜನೆಯ ಭಾಗವಾಗಿದೆ.

ಬಸ್ ಸಂಚಾರ ಶನಿವಾರ ಆರಂಭವಾಗಬೇಕಾಗಿತ್ತು. ಆದರೆ, ದೇವನಿಂದನೆ ಪ್ರಕರಣವೊಂದರಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿದ್ದ ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ದೋಷಮುಕ್ತಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ಪ್ರಶ್ನಿಸಿ ಪಾಕಿಸ್ತಾನದಾದ್ಯಂತ ಹಿಂಸಾತ್ಮಕ ಪ್ರತಿಭಟನೆ ನಡೆದ ಹಿನ್ನೆಲೆಯಲ್ಲಿ ಬಸ್ ಯಾನವನ್ನು ಮುಂದೂಡಲಾಗಿತ್ತು.

ಲಾಹೋರ್‌ನಿಂದ ಹೊರಡುವ ಬಸ್ ಚೀನಾದ ಪಶ್ಚಿಮದ ಅಂಚಿನಲ್ಲಿರುವ ಕಶ್ಗರ್ ನಗರ ತಲುಪಲು 36 ಗಂಟೆಗಳನ್ನು ತೆಗೆದುಕೊಳ್ಳುತ್ತದೆ.

ಲಾಹೋರ್‌ನಿಂದ ಕಶ್ಗರ್‌ಗೆ ಹೋಗುವ ಬಸ್‌ಗಳು ವಾರದಲ್ಲಿ ನಾಲ್ಕು ದಿನಗಳು-ಶನಿವಾರ, ರವಿವಾರ, ಸೋಮವಾರ ಮತ್ತು ಮಂಗಳವಾರ- ಓಡುತ್ತವೆ ಹಾಗೂ ಕಶ್ಗರ್‌ನಿಂದ ಲಾಹೋರ್‌ಗೆ ನಾಲ್ಕು ದಿನಗಳು- ಮಂಗಳವಾರ, ಬುಧವಾರ, ಗುರುವಾರ ಮತ್ತು ಶುಕ್ರವಾರ- ಓಡುತ್ತವೆ.

ಭಾರತದ ಪ್ರತಿಭಟನೆ

ಚೀನಾ ಮತ್ತು ಪಾಕಿಸ್ತಾನಗಳ ನಡುವೆ ಪಾಕ್ ಆಕ್ರಮಿತ ಕಾಶ್ಮೀರದ ಮೂಲಕ ಹಾದು ಹೋಗುವ ಬಸ್ ಸೇವೆಗೆ ಭಾರತ, ಚೀನಾ ಮತ್ತು ಪಾಕಿಸ್ತಾನಕ್ಕೆ ಆಕ್ಷೇಪಗಳನ್ನು ಕಳುಹಿಸಿತ್ತು.

ಚೀನಾ ವಿದೇಶ ಸಚಿವಾಲಯದ ವಕ್ತಾರ ಲೂ ಕಾಂಗ್ ಬಸ್ ಸೇವೆಯನ್ನು ಸಮರ್ಥಿಸಿಕೊಂಡಿದ್ದರು. ಚೀನಾ ಮತ್ತು ಪಾಕಿಸ್ತಾನಗಳ ನಡುವಿನ ಸಹಕಾರಕ್ಕು ಭೂವಿವಾದಕ್ಕೂ ಯಾವುದೇ ಸಂಬಂಧವಿಲ್ಲ ಹಾಗೂ ಕಾಶ್ಮೀರ ಕುರಿತ ಚೀನಾದ ಘೋಷಿತ ನೀತಿಯಲ್ಲಿ ಇದು ಯಾವುದೆ ಬದಲಾವಣೆ ಉಂಟು ಮಾಡುವುದಿಲ್ಲ ಎಂಬುದಾಗಿ ಅವರು ಹೇಳಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News