ವಾಮಾಚಾರಕ್ಕಾಗಿ ಮೂರರ ಬಾಲಕಿಯ ಕತ್ತು ಸೀಳಿ ಕೊಲೆ
ಪುದುಕೊಟ್ಟೈ,ನ.7: ನಾಪತ್ತೆಯಾಗಿದ್ದ ಮೂರರ ಹರೆಯದ ಬಾಲಕಿಯ ಶವವು ಕತ್ತು ಸೀಳಿ ಕೊಲೆ ಮಾಡಲ್ಪಟ್ಟ ಸ್ಥಿತಿಯಲ್ಲಿ ಪತ್ತೆಯಾದ ಘಟನೆ ಜಿಲ್ಲೆಯ ಕುರುಂಪತ್ತಿಯಲ್ಲಿ ನಡೆದಿದೆ. ಭೀಕರ ತಾಂತ್ರಿಕ ವಿಧಿಗಾಗಿ ಬಾಲಕಿಯನ್ನು ಬಲಿ ನೀಡಲಾಗಿದ್ದು,ಆರೋಪಿ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಕುರುಂಪತ್ತಿ ನಿವಾಸಿ ವೆಲ್ಲೈಸಾಮಿ ಎಂಬಾತನ ಪುತ್ರಿ ಶಾಲಿನಿ ಅ.25ರಂದು ಸಂಜೆ ಮನೆಯ ಬಳಿ ಆಟವಾಡುತ್ತಿದ್ದಾಗ ನಾಪತ್ತೆಯಾಗಿದ್ದಳು.
ಸ್ಥಳೀಯ ನಿವಾಸಿ,ವಾಮಾಚಾರ ನಡೆಸುತ್ತಿದ್ದ ಎಸ್.ಚಿನ್ನಪಿಳ್ಳೈ(47) ಎಂಬಾಕೆ ಮಗುವನ್ನು ಅಪಹರಿಸಿ ಸಮೀಪದ ಕಾಡಿಗೆ ಒಯ್ದಿದ್ದಳು. ಬಾಲಕಿಯನ್ನು ಬಲಿ ನೀಡಿದರೆ ತನ್ನ ತಾಂತ್ರಿಕ ಶಕ್ತಿಯು ಹೆಚ್ಚುತ್ತದೆ ಎಂದು ನಂಬಿದ್ದ ಆಕೆ ಬ್ಲೇಡಿನಿಂದ ಶಾಲಿನಿಯ ಕತ್ತನ್ನು ಸೀಳಿ ಕೊಲೆ ಮಾಡಿದ್ದಳು.
ಸಂಶಯದ ಮೇಲೆ ಚಿನ್ನಪಿಳ್ಳೈಯನ್ನು ಪೊಲೀಸರು ವಶಕ್ಕೆ ತೆಗೆದುಕೊಂಡು ವಿಚಾರಣೆ ನಡೆಸಿದಾಗ ಮಗುವನ್ನು ಕೊಂದಿದ್ದನ್ನು ಒಪ್ಪಿಕೊಂಡಿದ್ದಾಳೆ. ಆಕೆಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು,ನ್ಯಾಯಾಂಗ ಬಂಧನವನ್ನು ವಿಧಿಸಲಾಗಿದೆ.