ಶ್ರೀನಗರದಲ್ಲಿ ಘನೀಕರಣ ಮಟ್ಟಕ್ಕಿಂತ ಕೆಳಗಿಳಿದ ತಾಪಮಾನ
ಶ್ರೀನಗರ,ನ.7: ಇದೇ ಮೊದಲ ಬಾರಿ ತಾಪಮಾನ ಘನೀಕರಣ ಮಟ್ಟ (ಫ್ರೀಝಿಂಗ್ ಪಾಯಿಂಟ್)ಕ್ಕಿಂತ ಕೆಳಗಿಳಿಯುವ ಮೂಲಕ ಜಮ್ಮು ಮತ್ತು ಕಾಶ್ಮೀರದ ಶ್ರೀನಗರವು ಬುಧವಾರ ರಾತ್ರಿ ವರ್ಷದ ಅತ್ಯಂತ ತೀವ್ರ ಚಳಿಯ ರಾತ್ರಿಯನ್ನು ಕಂಡಿತು. ಬುಧವಾರ ರಾತ್ರಿ ಶ್ರೀನಗರದ ಕನಿಷ್ಟ ತಾಪಮಾನವು ಮೈನಸ್ 2.2 ಡಿಗ್ರಿ ಸೆಲ್ಶಿಯಸ್‌ನಷ್ಟು ಕೆಳಗೆ ಕುಸಿದಿತ್ತು ಎಂದು ಹವಾಮಾನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಈ ಚಳಿಗಾಲದ ಅವಧಿಯಲ್ಲಿ ರಾತ್ರಿ ಸಮಯದಲ್ಲಿ ಶ್ರೀನಗರದಲ್ಲಿ ಉಷ್ಣಾಂಶವು ಸಾಮಾನ್ಯಕ್ಕಿಂತ ಐದು ಡಿಗ್ರಿಯಷ್ಟು ಕಡಿಮೆಯಾಗಿದೆ ಎಂದು ಅವರು ತಿಳಿಸಿದ್ದಾರೆ. ಕಾಶ್ಮೀರ ಕಣಿವೆಯಾದ್ಯಂತ ಮತ್ತು ಲಡಾಕ್ ಪ್ರದೇಶದಲ್ಲಿ ಕನಿಷ್ಟ ತಾಪಮಾನವು ಘನೀಕರಣ ಮಟ್ಟಕ್ಕಿಂತ ಕೆಳಗಿತ್ತು ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಗುಲ್ಮಾರ್ಗ್‌ನಲ್ಲಿರುವ ಸ್ಕೈ-ರೆಸಾರ್ಟ್ ಕನಿಷ್ಟ ಮೈನಸ್ 6.6 ಡಿ.ಸೆ. ತಾಪಮಾನ ದಾಖಲಿಸಿದ್ದರೆ, ದಕ್ಷಿಣ ಕಾಶ್ಮೀರದಲ್ಲಿ ಅಮರನಾಥ ಯಾತ್ರಿಗಳ ಶಿಬಿರಗಳಾಗಿರುವ ಪಹಲ್ಗಾಮ್ ಹೆಲ್ತ್ ರೆಸಾರ್ಟ್ ಮೈನಸ್ 5.2 ಡಿ.ಸೆ ತಾಪಮಾನ ದಾಖಲಿಸಿದೆ.
ಕುಪ್ವಾರಾದಲ್ಲಿ ಮೈನಸ್ 1.8 ಡಿ.ಸೆ, ಲಡಾಕ್‌ನಲ್ಲಿ ಮೈನಸ್ 8.4 ಡಿ.ಸೆ ಮತ್ತು ಕಾರ್ಗಿಲ್‌ನಲ್ಲಿ ಅತ್ಯಂತ ಕಡಿಮೆ ಅಂದರೆ ಮೈನಸ್ 9.0 ಡಿಗ್ರಿ ಸೆಲ್ಶಿಯಸ್ ತಾಪಮಾನವನ್ನು ದಾಖಲಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.