ಜನಾರ್ದನ ರೆಡ್ಡಿ ತಪ್ಪು ಮಾಡಿದ್ದರೆ ಕ್ರಮವಾಗಲಿ: ಯಡಿಯೂರಪ್ಪ

Update: 2018-11-08 07:43 GMT

ಮಂಗಳೂರು, ನ.8: ಮಾಜಿ ಸಚಿವ ಗಾಲಿ ಜನಾರ್ದನ ರೆಡ್ಡಿ ಮೇಲಿನ ಆರೋಪಕ್ಕೆ ಸಂಬಂಧಿಸಿ ತನಗೇನು ತಿಳಿಯದು. ಯಾರೇ ಆದರೂ ತಪ್ಪು ಮಾಡಿದ್ದರೆ ಅವರ ವಿರುದ್ಧ ಕ್ರಮವಾಗಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಹೇಳಿದ್ದಾರೆ.

ಕೇರಳಕ್ಕೆ ತೆರಳಲು ಇಂದು ಬೆಳಗ್ಗೆ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬಂದಿಳಿದ ಅವರು ಸುದ್ದಿಗಾರರ ಪ್ರಶ್ನೆಗೆ ಈ ರೀತಿ ಪ್ರತಿಕ್ರಿಯಿಸಿದರು. ಜನಾರ್ದನ ರೆಡ್ಡಿ ಈಗ ನಮ್ಮ ಪಕ್ಷದಲ್ಲಿಲ್ಲ. ಅವರ ಅವರ ಮೇಲಿನ ಆರೋಪದ ಬಗ್ಗೆ ತನಗೆ ಯಾವುದೇ ಮಾಹಿತಿ ಇಲ್ಲ ಎಂದರು.

ಈ ವೇಳೆ ಮಂಗಳವಾರ ಪ್ರಕಟಗೊಂಡ ಉಪಚುನಾವಣೆಯ ಫಲಿತಾಂಶದ ಮಾಧ್ಯಮದವರು ಕೇಳಿದ ಪ್ರಶ್ನೆಗಳಿಗೆ ಯಾವುದೇ ಪ್ರತಿಕ್ರಿಯೆ ನೀಡಲು ಯಡಿಯೂರಪ್ಪ ನಿರಾಕರಿಸಿದರು.

ಕಾಸರಗೋಡಿನಲ್ಲಿರುವ ಮಧೂರು ದೇವಸ್ಥಾನದಲ್ಲಿ ನಡೆಯುವ ಬಿಜೆಪಿ ರಥಯಾತ್ರೆಯ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಶಬರಿಮಲೆ ಉಳಿಸಬೇಕೆಂದು ರಥಯಾತ್ರೆ ನಡೆಯುತ್ತಿದೆ. ಕೇರಳದ ಬೇರೆ ಐದು ಕಡೆಗಳಲ್ಲಿ ಅಯ್ಯಪ್ಪ ದೇವಸ್ಥಾನಗಳಲ್ಲಿ ಮಹಿಳೆಯರಿಗೆ ಪ್ರವೇಶ ಇದ್ದು, ಶಬರಿಮಲೆಯಲ್ಲಿ ವಿಶೇಷ ಕಾರಣಕ್ಕೋಸ್ಕರ ಮಹಿಳೆಯರಿಗೆ ಬಹಳ ವರ್ಷಗಳಿಂದ ಪ್ರವೇಶವಿಲ್ಲ. ಆದರೆ ಸರಕಾರದ ಕಪಿಮುಷ್ಟಿಯಿಂದ ಇದೆಲ್ಲ ನಡೆಯುತ್ತಿದೆ ಎಂದು ಆರೋಪಿಸಿದರು.

ಬಳಿಕ ಯಡಿಯೂರಪ್ಪ ಕೇರಳದಲ್ಲಿ ಬಿಜೆಪಿ ಆರಂಭಿಸಲಿರುವ ರಥಯಾತ್ರೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಲು ತೆರಳಿದರು. ವಿಮಾನ ನಿಲ್ದಾಣದಲ್ಲಿ ಯಡಿಯೂರಪ್ಪರನ್ನು ಸಂಸದ ನಳಿನ್ ಕುಮಾರ್ ಕಟೀಲು, ವಿಧಾನ ಪರಿಷತ್ ವಿಪಕ್ಷ ನಾಯಕ ಕೋಟ ಶ್ರೀನಿವಾಸ ಪೂಜಾರಿ ಸಹಿತ ಏಳು ಶಾಸಕರು ಬರಮಾಡಿಕೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News