ನೋಟ್ ಬ್ಯಾನ್ ನ ಗಾಯ ಸಮಯ ಸರಿದಂತೆ ಸ್ಪಷ್ಟವಾಗುತ್ತಿದೆ: ಮನಮೋಹನ್ ಸಿಂಗ್

Update: 2018-11-08 11:30 GMT

ಹೊಸದಿಲ್ಲಿ, ನ.8: “ಸಮಯ ಗಾಯಗಳನ್ನು ಗುಣಪಡಿಸುತ್ತದೆ ಎಂದು ಹೇಳಲಾಗುತ್ತದೆ. ಆದರೆ ದುರದೃಷ್ಟವಶಾತ್ ಅಮಾನ್ಯೀಕರಣದ ವಿಚಾರ ಬಂದಾಗ ಗಾಯಗಳು ಸಮಯ ಸರಿದಂತೆ ಇನ್ನಷ್ಟು ಸ್ಪಷ್ಟವಾಗಿ ಗೋಚರಿಸುತ್ತಿದೆ'' ಎಂದು ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಅಮಾನ್ಯೀಕರಣದ ಎರಡನೇ ವಾರ್ಷಿಕೋತ್ಸವದ ಸಂದರ್ಭ ಹೇಳಿದ್ದಾರೆ.

“ಆರ್ಥಿಕ ನೀತಿಗಳಲ್ಲಿ ಸ್ಪಷ್ಟತೆಯನ್ನು ಮರು ಸ್ಥಾಪಿಸಲು ಸರಕಾರವನ್ನು ಕೇಳಿಕೊಳ್ಳುತ್ತೇನೆ. ಆರ್ಥಿಕ ದುಸ್ಸಾಹಸಗಳು ದೇಶವನ್ನು ಹೇಗೆ ಬಹುಕಾಲ ಕಷ್ಟದಲ್ಲಿ ಸಿಲುಕಿಸಬಹುದೆಂಬುದನ್ನು ನೆನಪಿಸುವ ದಿನವಿದು. ಆರ್ಥಿಕ ನೀತಿಗಳನ್ನು  ಜತನದಿಂದ ನಿರ್ವಹಿಸಬೇಕಾಗಿದೆ” ಎಂದು ಅವರು ಹೇಳಿದ್ದಾರೆ.

“ಯಾವುದೇ ಪೂರ್ವ ತಯಾರಿಯಿಲ್ಲದೆ ನೋಟು ಅಮಾನ್ಯೀಕರಣವನ್ನು ನವೆಂಬರ್ 8, 2016ರಂದು ಜಾರಿಗೊಳಿಸಲಾಗಿತ್ತು. ಅದು ಭಾರತದ ಅರ್ಥವ್ಯವಸ್ಥೆಯಲ್ಲಿ ಸೃಷ್ಟಿಸಿದ ಅಲ್ಲೋಲಕಲ್ಲೋಲ ಎಲ್ಲರ ಕಣ್ಣೆದುರಿಗೆ ಇದೆ. ಸಣ್ಣ ಮತ್ತು ಮಧ್ಯಮ ಕೈಗಾರಿಕೆಗಳು ಅಮಾನ್ಯೀಕರಣದ ಆಘಾತದಿಂದ ಇನ್ನಷ್ಟೇ ಚೇತರಿಸಿಕೊಳ್ಳಬೇಕಿದೆ” ಎಂದು ಸಿಂಗ್ ಹೇಳಿದರು. ಇನ್ನು ಮುಂದೆ ಆರ್ಥಿಕತೆಯಲ್ಲಿ ಅನಿಶ್ಚಿತತೆಯುಂಟು ಮಾಡುವ ಇಂತಹ ಅಸಾಂಪ್ರದಾಯಿಕ ಕ್ರಮ ಕೈಗೊಳ್ಳದೇ ಇರುವಂತೆಯೂ ಅವರು ಸಲಹೆ ನೀಡಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News