×
Ad

ನೋಟು ನಿಷೇಧ: ಪ್ರತಿಪಕ್ಷಗಳು ಪ್ರಧಾನಿ ಮೋದಿಗೆ ನೆನಪಿಸಿದ್ದು ಏನನ್ನು ಗೊತ್ತಾ?

Update: 2018-11-08 19:47 IST

ಹೊಸದಿಲ್ಲಿ,ನ.8: ನೋಟು ನಿಷೇಧದ ಎರಡನೇ ವರ್ಷಾಚರಣೆಯ ದಿನವಾದ ಗುರುವಾರ ಆ ನಿರ್ಧಾರಕ್ಕಾಗಿ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ದಾಳಿ ನಡೆಸುವಲ್ಲಿ ಪ್ರತಿಪಕ್ಷಗಳು ಒಂದಾಗಿವೆ. ಎಡರಂಗದ ಸೀತಾರಾಮ ಯೆಚೂರಿ ಅವರಿಂದ ಹಿಡಿದು ಕಾಂಗ್ರೆಸ್‌ನ ಶಶಿ ತರೂರ್ ಮತ್ತು ಮನೀಷ್ ತಿವಾರಿಯವರವರೆಗೆ ಹಲವಾರು ಪ್ರತಿಪಕ್ಷ ನಾಯಕರು ನೋಟು ನಿಷೇಧವನ್ನು ಘೋಷಿಸಿದಾಗ ಮೋದಿಯವರು ಕೋರಿದ್ದ 50 ದಿನಗಳ ಗಡುವನ್ನು ಅವರಿಗೆ ನೆನಪಿಸಿದ್ದಾರೆ.

ನೋಟು ನಿಷೇಧದ ದಿಢೀರ್ ಕ್ರಮದಿಂದಾಗಿ ಉಂಟಾಗುವ ತೀವ್ರ ನಗದು ಕೊರತೆ ಮತ್ತು ಇತರ ಸಮಸ್ಯೆಗಳನ್ನು 50 ದಿನಗಳಲ್ಲಿ ಬಗೆಹರಿಸುವುದಾಗಿ ಮೋದಿ ಆಗ ದೇಶದ ಜನತೆಗೆ ಭರವಸೆ ನೀಡಿದ್ದರು.

 ಮೋದಿಯವರ ಅಂದಿನ ಹೇಳಿಕೆಯ ವೀಡಿಯೊ ತುಣುಕನ್ನು ಪೋಸ್ಟ್ ಮಾಡಿರುವ ಸಿಪಿಎಂ ನಾಯಕ ಸೀತಾರಾಮ ಯೆಚೂರಿ ಅವರು,‘‘ಮೋದಿಯವರಿಗೆ ತಾನು ಹೇಳಿದ್ದು ಮರೆತುಹೋಗಿದೆ ಎನ್ನುವುದು ಸ್ಪಷ್ಟವಾಗಿದೆ. ಅವರು ಭಾರತಕ್ಕೆ ಮತ್ತು ಭಾರತೀಯರಾದ ನಮಗೆ ಏನು ಮಾಡಿದ್ದರು ಎನ್ನುವುದನ್ನು ಅವರಿಗೆ ನೆನಪಿಸುವುದು ನಮ್ಮ ಕರ್ತವ್ಯವಾಗಿದೆ ’’ಎಂದು ಟ್ವೀಟಿಸಿದ್ದಾರೆ.

ಇದನ್ನು ಮರುಟ್ವೀಟಿಸಿರುವ ಕಾಂಗ್ರೆಸ್ ನಾಯಕ ಹಾಗೂ ಮಾಜಿ ಕೇಂದ್ರ ಸಚಿವ ಶಶಿ ತರೂರ್ ಅವರು,ನಾವು ಅವರಿಗೆ 50 ದಿನಗಳ ಸಮಯಾವಕಾಶವನ್ನು ನೀಡಿದ್ದೆವು.ಆದರೆ ಆ ಅವಧಿಯಲ್ಲಿ ದೇಶದ ಆರ್ಥಿಕತೆಯು ದಹನಗೊಂಡಿತ್ತು’’ ಎಂದು ಕುಟುಕಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News