ದೀಪಾವಳಿ ಬೋನಸ್‌ಗೆ ಒತ್ತಾಯಿಸಿ ಏರ್‌ಇಂಡಿಯಾ ಸಿಬ್ಬಂದಿ ಮುಷ್ಕರ

Update: 2018-11-08 14:57 GMT

ಮುಂಬೈ, ನ.8: ದೀಪಾವಳಿ ಬೋನಸ್ ಪಾವತಿಸದ ಕಾರಣಕ್ಕೆ ಏರ್‌ಇಂಡಿಯಾದ ಗುತ್ತಿಗೆ ನೌಕರರು ಮುಷ್ಕರ ಹೂಡಿದ ಹಿನ್ನೆಲೆಯಲ್ಲಿ ಗುರುವಾರ ಏರ್‌ ಇಂಡಿಯಾದ ವಿಮಾನಗಳ ಸಂಚಾರಕ್ಕೆ ಅಡಚಣೆಯುಂಟಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಸಂಸ್ಥೆಯ ‘ಗ್ರೌಂಡ್ ಹ್ಯಾಂಡ್ಲಿಂಗ್’ ಸೇವೆ ಒದಗಿಸುವ ವಿಭಾಗದ ಗುತ್ತಿಗೆ ನೌಕರರು ಮುಷ್ಕರ ನಡೆಸಿದ ಕಾರಣ ಏರ್‌ ಇಂಡಿಯಾದ 13 ವಿಮಾನಗಳ ಸಂಚಾರ ವಿಳಂಬವಾಗಿದೆ. ಈ ವಿಭಾಗದಲ್ಲಿ ಗುತ್ತಿಗೆ ನೌಕರರೂ ಸೇರಿ ಸುಮಾರು 5 ಸಾವಿರ ಸಿಬ್ಬಂದಿಗಳಿದ್ದಾರೆ. ದೀಪಾವಳಿ ಬೋನಸ್ ಪಾವತಿಸದ ಕಾರಣ ಗುತ್ತಿಗೆ ನೌಕರರು ಬುಧವಾರ ಮುಷ್ಕರ ಆರಂಭಿಸಿದ್ದು ಗುರುವಾರ ಮುಷ್ಕರ ತೀವ್ರಗೊಂಡಿದೆ. ಗುರುವಾರ 10 ದೇಶೀಯ ಹಾರಾಟದ ವಿಮಾನ ಹಾಗೂ ಮೂರು ಅಂತರಾಷ್ಟ್ರೀಯ ಸೇವೆಯ ವಿಮಾನಗಳ ಸಂಚಾರ ಸುಮಾರು 3 ಗಂಟೆಯಷ್ಟು ವಿಳಂಬವಾಗಿದೆ. ಇದೀಗ ‘ಗ್ರೌಂಡ್ ಹ್ಯಾಂಡ್ಲಿಂಗ್’ ವಿಭಾಗದಲ್ಲಿ ಕರ್ತವ್ಯ ನಿರ್ವಹಿಸುವಂತೆ ಕಾಯಂ ಸಿಬ್ಬಂದಿಗಳಿಗೆ ತಿಳಿಸಲಾಗಿದೆ. ಅಲ್ಲದೆ ಮುಷ್ಕರನಿರತ ಸಿಬ್ಬಂದಿಗಳೊಂದಿಗೆ ಮಾತುಕತೆ ಮುಂದುವರಿದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News