ಕಾಶ್ಮೀರಿ ಪಂಡಿತರಿಗೆ ಸರಕಾರದ ಪ್ಯಾಕೇಜ್: ತನಿಖೆಗೆ ಸಿಖ್ ಸಂಘಟನೆ ಆಗ್ರಹ

Update: 2018-11-08 15:06 GMT
ಸಾಂದರ್ಭಿಕ ಚಿತ್ರ

ಶ್ರೀನಗರ, ನ.8: ಜಮ್ಮು ಕಾಶ್ಮೀರದಲ್ಲಿ ಇತರ ಸಮುದಾಯದವರನ್ನು ಸಂಪೂರ್ಣ ನಿರ್ಲಕ್ಷಿಸಿ ಕಾಶ್ಮೀರಿ ಪಂಡಿತರಿಗೆ ಮಾತ್ರ ವಿವಿಧ ರೀತಿಯ ಪ್ಯಾಕೇಜ್‌ಗಳನ್ನು ಕೇಂದ್ರದಲ್ಲಿ ಅಧಿಕಾರ ನಡೆಸುವ ಸರಕಾರಗಳು ನಿರಂತರ ಘೋಷಿಸುತ್ತಿರುವುದರ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಯಬೇಕೆಂದು ಸಿಖ್ ಸಂಘಟನೆಯೊಂದು ಆಗ್ರಹಿಸಿದೆ.

ಹಲವಾರು ವರ್ಷಗಳಿಂದ ಕೇಂದ್ರ ಸರಕಾರ ಕಾಶ್ಮೀರಿ ಪಂಡಿತರಿಗೆ ಮಾತ್ರ ವಿವಿಧ ರೀತಿಯ ಪ್ಯಾಕೇಜ್(ಅಭಿವೃದ್ಧಿ ಯೋಜನೆಗಳು)ಗಳನ್ನು ಪ್ರಕಟಿಸುತ್ತಿದೆ. ಆದರೆ ಮುಸ್ಲಿಂ ಅಥವಾ ಸಿಖ್ ಸಮುದಾಯದವರಿಗೆ ಏನನ್ನೂ ನೀಡಲಾಗಿಲ್ಲ ಎಂದು ಅಖಿಲ ಪಕ್ಷಗಳ ಸಿಖ್ ಸಮನ್ವಯ ಸಮಿತಿ (ಎಪಿಎಸ್‌ಸಿಸಿ)ಯ ಅಧ್ಯಕ್ಷ ಜಗಮೋಹನ್ ಸಿಂಗ್ ರೈನಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಉದ್ಯೋಗ, ರಾಜಕೀಯ ಪ್ರಾತಿನಿಧ್ಯತೆ, ವ್ಯಾಪಾರ, ಕೃಷಿ, ತೋಟಗಾರಿಕೆ ಇತ್ಯಾದಿ ಕ್ಷೇತ್ರಗಳಲ್ಲಿ ಸಿಖ್ಖರು ಕಳೆದ ಹಲವು ವರ್ಷಗಳಿಂದ ಬಹಳಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ಆದರೆ ಇದನ್ನು ನಿರ್ಲಕ್ಷಿಸಿ ಕೇವಲ ಕಾಶ್ಮೀರಿ ಪಂಡಿತರಿಗೆ ಮಾತ್ರ ವಿವಿಧ ಪ್ಯಾಕೇಜ್‌ಗಳನ್ನು ನಿರಂತರ ಸರಕಾರಗಳು ಘೋಷಿಸುತ್ತಾ ಬರುತ್ತಿವೆ. ಕಾಲಾನುಕಾಲಕ್ಕೆ ಈ ಪ್ಯಾಕೇಜ್‌ಗಳನ್ನು ಘೋಷಿಸುವ ಅಧಿಕಾರಿಗಳು ಯಾರು ಎಂಬುದನ್ನು ಸುಪ್ರೀಂಕೋರ್ಟ್‌ನ ಹಾಲಿ ನ್ಯಾಯಾಧೀಶರು ಅಥವಾ ಸಂಸದೀಯ ಸಮಿತಿಯ ಮೂಲಕ ತನಿಖೆ ನಡೆಸಿ ಪತ್ತೆಹಚ್ಚಬೇಕು ಎಂದವರು ಆಗ್ರಹಿಸಿದ್ದಾರೆ.

 2017ರ ಅಕ್ಟೋಬರ್‌ನಲ್ಲಿ ರಾಜ್ಯ ಸರಕಾರ ಘೋಷಿಸಿರುವ ಎಸ್‌ಆರ್‌ಒ(ಸದ್ರೆ ರಿಯಾಸತ್ ಆಧ್ಯಾದೇಶ)425ರಲ್ಲಿ ಕಾಶ್ಮೀರದಲ್ಲಿ ನೆಲೆಸಿರುವ ಪಂಡಿತರಿಗೆ ಪ್ರಧಾನಮಂತ್ರಿಗಳ ಪ್ಯಾಕೇಜ್‌ನಡಿ ಉದ್ಯೋಗ ಒದಗಿಸಲಾಗಿದೆ. ಈ ಕ್ರಮ ಸಿಖ್ ಸಮುದಾಯದವರ ವಿರುದ್ಧದ ಸಮಗ್ರ ತಾರತಮ್ಯಕ್ಕೆ ಉದಾಹರಣೆಯಾಗಿದೆ. ಎಸ್‌ಆರ್‌ಒ ಏಕಪಕ್ಷೀಯ ಮತ್ತು ಅಕ್ರಮವಾಗಿದ್ದು ಭಾರತದ ಸಂವಿಧಾನದಡಿ ನೀಡಲಾಗಿರುವ ಮೂಲಭೂತ ಹಕ್ಕಿನ ಉಲ್ಲಂಘನೆಯಾಗಿದೆ ಎಂದವರು ಹೇಳಿದ್ದು ಕೇಂದ್ರ ಮತ್ತು ರಾಜ್ಯ ಸರಕಾರಗಳಿಂದ ಆಗುತ್ತಿರುವ ಅನ್ಯಾಯದ ವಿರುದ್ಧ ಸಮುದಾಯದ ಸದಸ್ಯರು ತೀವ್ರ ಪ್ರತಿಭಟನೆಗೆ ಮುಂದಾಗಬೇಕು ಎಂದಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News