ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಿ ನಿರ್ಮೂಲನಗೊಳಿಸುವ ಸಿ-ಡಾಟ್ ಅಭಿವೃದ್ಧಿಗೊಳಿಸಿದ ಭಾರತದ ಸಂಶೋಧಕರು
ಹೊಸದಿಲ್ಲಿ, ನ.8: ಏಕಕಾಲದಲ್ಲಿ ಕ್ಯಾನ್ಸರ್ ಕೋಶಗಳನ್ನು ಪತ್ತೆಹಚ್ಚಿ ನಾಶಪಡಿಸುವ ಪ್ರತಿದೀಪಕ (ಪ್ರಕಾಶಮಾನ) ಸಿ-ಡಾಟ್(ಕಾರ್ಬನ್ ನ್ಯಾನೊಡಾಟ್)ಗಳನ್ನು ರೂರ್ಕಿ ಐಐಟಿಯ ಸಂಶೋಧಕರು ಅಭಿವೃದ್ಧಿಗೊಳಿಸಿದ್ದಾರೆ. ರೋಸ್‌ಪೆರಿವಿಂಕಲ್ ಎಂಬ ವನಸ್ಪತಿ ಗಿಡದ ಎಲೆಗಳಿಂದ ಹೊರತೆಗೆಯಲಾದ ಸಣ್ಣಗಾತ್ರದ ಕಾರ್ಬನ್ (ಇಂಗಾಲ)ದ ವಸ್ತುಗಳು ರೋಗ ನಿರ್ಣಯ ಹಾಗೂ ಚಿಕಿತ್ಸಕ ಪ್ರತಿನಿಧಿಗಳಾಗಿ ಕಾರ್ಯನಿರ್ವಹಿಸಲಿವೆ.
ಈ ಸಣ್ಣಗಾತ್ರದ ಸಿ-ಡಾಟ್‌ಗಳಿಂದ ಕ್ಯಾನ್ಸರ್ ಕೋಶಗಳನ್ನು ಗುರುತಿಸಬಹುದು ಹಾಗೂ ಅವು ದೇಹದ ಯಾವ ಭಾಗದಲ್ಲಿವೆ ಎಂಬುದನ್ನು ಪತ್ತೆಹಚ್ಚಬಹುದಾಗಿದೆ. ನಿಖರವಾದ ಶಸ್ತ್ರಚಿಕಿತ್ಸಾ ಕ್ರಮದಿಂದ ಇವನ್ನು ನಿರ್ಮೂಲನೆ ಗೊಳಿಸಬಹುದು ಎಂದು ಸಂಶೋಧನಾ ತಂಡದ ನೇತೃತ್ವ ವಹಿಸಿರುವ ಪಿ.ಗೋಪಿನಾಥ್ ತಿಳಿಸಿದ್ದಾರೆ. ಕ್ಯಾನ್ಸರ್ ರೋಗನಿರ್ಣಯ ಹಾಗೂ ಚಿಕಿತ್ಸಾ ಪ್ರಕ್ರಿಯೆಯಲ್ಲಿ ನ್ಯಾನೊ ತಂತ್ರಜ್ಞಾನ ಪ್ರಮುಖ ವಿಭಾಗವಾಗಿ ಗುರುತಿಸಿಕೊಂಡಿದೆ.
ವೈದ್ಯಕೀಯ ವಿಜ್ಞಾನ ಪದ್ದತಿಯಲ್ಲಿ ಇವನ್ನು ಅನ್ವಯಿಸುವ ಮೊದಲು ಮುಂದಿನ ಹಂತದಲ್ಲಿ ಪ್ರಾಣಿಗಳ ದೇಹದಲ್ಲಿ ಇವುಗಳನ್ನು ಪ್ರಯೋಗಿಸಿ ಅಧ್ಯಯನ ನಡೆಸಲಾಗುವುದು ಎಂದವರು ತಿಳಿಸಿದ್ದಾರೆ. ರೂರ್ಕಿ ಐಐಟಿ ವಿಜ್ಞಾನಿಗಳ ಸಂಶೋಧನೆಗೆ ವಿಜ್ಞಾನ ಮತ್ತು ಇಂಜಿನಿಯರಿಂಗ್ ಸಂಶೋಧನಾ ಮಂಡಳಿ (ಎಸ್‌ಇಆರ್‌ಬಿ) ಮತ್ತು ಕೇಂದ್ರ ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆಯ ಬಯೊಟೆಕ್ನಾಲಜಿ ವಿಭಾಗ ನೆರವು ನೀಡಿದೆ.