ಕೇರಳದ ಟಾಪರ್ ಅಜ್ಜಿಗೆ ಲ್ಯಾಪ್‌ಟಾಪ್ ಕೊಡುಗೆ
ತಿರುವನಂತಪುರ, ನ. 8: ‘ಅಕ್ಷರಲಕ್ಷಂ’ ಯೋಜನೆ ಅಡಿಯಲ್ಲಿ ಕೇರಳದ ಸಾಕ್ಷರತೆ ಪರೀಕ್ಷೆಯನ್ನು ಅತ್ಯುಚ್ಚ ಶ್ರೇಣಿಯಲ್ಲಿ ಉತ್ತೀರ್ಣರಾಗುವ ಮೂಲಕ ಇತಿಹಾಸ ಸೃಷ್ಟಿಸಿದ 96 ವರ್ಷದ ಕಾರ್ತಿಯಾಯಿನಿ ಅಮ್ಮಾ ಅವರಿಗೆ ರಾಜ್ಯ ಶಿಕ್ಷಣ ಸಚಿವ ಸಿ. ರವೀಂದ್ರನಾಥ್ ಬುಧವಾರ ಲ್ಯಾಪಟಾಪ್ ಕೊಡುಗೆ ನೀಡಿದ್ದಾರೆ.
ಕಳೆದ ವಾರ ಕಾರ್ತಿಯಾಯಿನಿ ಅಮ್ಮಾ ಕಂಪ್ಯೂಟರ್ ಕಲಿಯುವ ಆಕಾಂಕ್ಷೆ ವ್ಯಕ್ತಪಡಿಸಿದ್ದರು. ಅವರ ಆಕಾಂಕ್ಷೆ ಈಡೇರಿಸುವ ಉದ್ದೇಶ ದಿಂದ ರವೀಂದ್ರ ನಾಥ್ ಅವರು ಮನೆಗೆ ಭೇಟಿ ನೀಡಿ ಲ್ಯಾಪ್‌ಟಾಪ್ ಕೊಡುಗೆ ನೀಡಿದ್ದಾರೆ. ರಾಜ್ಯ ಸಾಕ್ಷರಕತೆ ಕಾರ್ಯಕ್ರಮದಲ್ಲಿ 100ರಲ್ಲಿ 98 ಅಂಕ ಗಳಿಸಿದ ಆಲಪ್ಪುಳ ಜಿಲ್ಲ್ಲೆಯ 96ರ ಹರೆಯದ ನಿವಾಸಿ ಕಾರ್ತಿಯಾಯಿನಿ ಅಮ್ಮಾ ಅವರನ್ನು ಕೇರಳದ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಗೌರವಿಸಿದ್ದರು. ಸಾಕ್ಷರತಾ ಪರೀಕ್ಷೆಯಲ್ಲಿ ಬರೆಯುವುದು, ಓದುವುದು ಹಾಗೂ ಮೂಲಭೂತ ಗಣಿತ ಕೌಶಲವನ್ನು ಪರಿಶೀಲಿಸಲಾಗಿತ್ತು. ಈ ಪರೀಕ್ಷೆಗೆ 43,330 ಅಭ್ಯರ್ಥಿಗಳು ಹಾಜರಾಗಿದ್ದರು.
ಕೇರಳದಲ್ಲಿ ಶೇ. 100 ಸಾಕ್ಷರತೆ ಸಾಧಿಸುವ ಹಿನ್ನೆಲೆಯಲ್ಲಿ ಈ ವರ್ಷ ಗಣರಾಜ್ಯೋತ್ಸವ ದಿನದಂದು ಈ ಸಾಕ್ಷರತೆ ಕಾರ್ಯಕ್ರಮ ಆರಂಭಿಸಲಾಗಿತ್ತು.