ಸುಪ್ರೀಂ ಆದೇಶ ಉಲ್ಲಂಘನೆ: ಪಟಾಕಿ ಸಿಡಿಸಿದ್ದರಿಂದ ಹೊಸದಿಲ್ಲಿಯಲ್ಲಿ ಮಬ್ಬು
ಹೊಸದಿಲ್ಲಿ, ನ. 8: ಸುಪ್ರೀಂ ಕೋರ್ಟ್ ಅಂತಿಮ ಗಡು ನೀಡಿದ ಬಳಿಕ ದಿಲ್ಲಿ ನಾಗರಿಕರು ನಿರಂತರ ಪಟಾಕಿಗಳನ್ನು ಸಿಡಿಸಿದ ಪರಿಣಾಮ ವಾಯು ಗುಣಮಟ್ಟ ‘ತುಂಬಾ ಕಳಪೆ’ಗೆ ಇಳಿಯುತ್ತಿರುವುದರೊಂದಿಗೆ ಬುಧವಾರ ರಾತ್ರಿ ಹೊಸದಿಲ್ಲಿಯಲ್ಲಿ ಗಾಢ ಮಬ್ಬು ಆವರಿಸಿತು. ಬುಧವಾರ ರಾತ್ರಿ 11 ಗಂಟೆಗೆ ಒಟ್ಟು ವಾಯು ಗುಣಮಟ್ಟ ಸೂಚ್ಯಾಂಕ (ಎಕ್ಯೂಐ) ಅತೀ ಕಳಪೆ 302 ದಾಖಲಾಗಿದೆ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.
ಸಂಜೆ 7 ಗಂಟೆಯಿಂದ ವಾಯು ಗುಣಮಟ್ಟ ಕ್ಷೀಣಿಸುತ್ತಾ ಬಂತು. ಎಕ್ಯೂಐ 7 ಗಂಟೆಗೆ 281 ಇತ್ತು. 8 ಗಂಟೆಗೆ ಅದು 291ಕ್ಕೆ ಏರಿಕೆಯಾಯಿತು. 9 ಗಂಟೆಗೆ ಇನ್ನಷ್ಟು ಕ್ಷೀಣಿಸಿ 294ಕ್ಕೆ ಏರಿತು ಹಾಗೂ 10 ಗಂಟೆಗೆ 296ಕ್ಕೆ ಏರಿಕೆಯಾಯಿತು ಎಂದು ಮಂಡಳಿ ತಿಳಿಸಿದೆ. ದೀಪಾವಳಿ ಹಾಗೂ ಇತರ ಹಬ್ಬಗಳ ಸಂದರ್ಭ ರಾತ್ರಿ 8ರಿಂದ 10 ಗಂಟೆ ವರೆಗೆ ಮಾತ್ರ ಪಟಾಕಿಗಳನ್ನು ಸಿಡಿಸಲು ಸುಪ್ರೀಂ ಕೋರ್ಟ್ ಅನುಮತಿ ನೀಡಿತ್ತು. ಅಲ್ಲದೆ, ಕಡಿಮೆ ಪ್ರಕಾಶ, ಹೊಗೆ ಹಾಗೂ ಕಡಿಮೆ ಹಾನಿಕಾರಕ ರಾಸಾಯನಿಕ ಇರುವ ಪರಿಸರ ಸ್ನೇಹಿ ಪಟಾಕಿಗಳ ಉತ್ಪಾದನೆ ಹಾಗೂ ಮಾರಾಟಕ್ಕೆ ಮಾತ್ರ ಅನುಮತಿ ನೀಡಿತ್ತು.
ನಿಷೇಧಿತ ಪಟಾಕಿ ಮಾರಾಟ ಮಾಡದಂತೆ ಕ್ರಮ ಕೈಗೊಳ್ಳಬೇಕು. ಒಂದು ವೇಳೆ ಆದೇಶವನ್ನು ಯಾವುದೇ ರೀತಿಯಲ್ಲಿ ಉಲ್ಲಂಘಿಸಿದರೆ, ಸಂಬಂಧಿತ ಪೊಲೀಸ್ ಠಾಣೆಯ ಎಸ್‌ಎಚ್‌ಒ ಅವರನ್ನು ವೈಯುಕ್ತಿಕವಾಗಿ ಬಾಧ್ಯಸ್ತರನ್ನಾಗಿ ಮಾಡಲಾಗುವುದು ಎಂದು ನ್ಯಾಯಾಲಯ ಹೇಳಿತ್ತು. ಸುಪ್ರೀಂ ಕೋರ್ಟ್ ತೀರ್ಪಿನ ಹೊರತಾಗಿಯೂ ಹಲವು ಪ್ರದೇಶಗಳಲ್ಲಿ 10 ಗಂಟೆಯ ಬಳಿಕವೂ ಪಟಾಕಿ ಸಿಡಿಸಿ ಆದೇಶ ಉಲ್ಲಂಘಿಸಿರುವುದು ಬೆಳಕಿಗೆ ಬಂದಿದೆ. ಹಲವು ಪ್ರದೇಶಗಳಲ್ಲಿ ವಾಯ ಮಾಲಿನ್ಯ ತೀವ್ರವಾಗಿದೆ. ಆನಂದ್ ವಿಹಾರ್, ಐಟಿಒ ಹಾಗೂ ಜಹಾಂಗೀರ್‌ಪುರಿಯಂತಹ ಪ್ರದೇಶಗಳಲ್ಲಿ ಅತ್ಯಧಿಕ ವಾಯು ಮಾಲಿನ್ಯ ದಾಖಲಾಗಿದೆ.