ಶಬರಿಮಲೆ ಮುಖ್ಯ ಅರ್ಚಕರಿಂದ ವಿವರಣೆ ಕೋರಿದ ಟಿಡಿಬಿ

Update: 2018-11-08 15:22 GMT

ತಿರುವನಂತಪುರ, ನ. 8: ಶಬರಿಮಲೆ ದೇವಾಲಯಕ್ಕೆ ಮಹಿಳೆಯರು ಪ್ರವೇಶಿಸಿದರೆ, ದೇವಾಲಯದ ಬಾಗಿಲು ಮುಚ್ಚಲಾಗುವುದು ಎಂದು ಬೆದರಿಕ ಒಡ್ಡುವ ಮುನ್ನ ಶಬರಿಮಲೆ ದೇವಾಲಯದ ಮುಖ್ಯ ಅರ್ಚಕ ಕಂದರಾರು ರಾಜೀವರು ನನ್ನೊಂದಿಗೆ ಸಮಾಲೋಚನೆ ನಡೆಸಿದ್ದರು ಎಂದು ಬಿಜೆಪಿ ರಾಜ್ಯ ಕಾರ್ಯದರ್ಶಿ ನೀಡಿದ ಹೇಳಿಕೆ ಬಗ್ಗೆ ವಿವರಣೆ ನೀಡುವಂತೆ ತಿರುವಾಂಕೂರು ದೇವಸ್ವಂ ಮಂಡಳಿ ಕಂದರಾರು ರಾಜೀವರು ಅವರಿಗೆ ಸೂಚಿಸಿದೆ.

ಆದಾಗ್ಯೂ, ಬಿಜೆಪಿಯ ಪ್ರತಿಪಾದನೆಯನ್ನು ತಂತ್ರಿ (ಮುಖ್ಯ ಅರ್ಚಕ) ಅವರು ಈಗಾಗಲೇ ನಿರಾಕರಿಸಿರುವುದರಿಂದ, ಇದು ಔಪಚಾರಿಕ ಪ್ರಕ್ರಿಯೆ ಎಂದು ಟಿಡಿಬಿ ಗುರುವಾರ ಸ್ಪಷ್ಟಪಡಿಸಿದೆ. ಬಿಜೆಪಿಯ ರಾಜ್ಯಾಧ್ಯಕ್ಷ ಪಿ.ಎಸ್. ಶ್ರೀಧರನ್ ಪಿಳ್ಳೆ ಅವರ ಪ್ರತಿಪಾದನೆಯಿಂದ ರಾಜ್ಯದಲ್ಲಿ ವಿವಾದ ಹರಡಿದ ಬಳಿಕ ಟಿಡಿಬಿ ಆಯುಕ್ತ ಎನ್. ವಾಸು ವಿವರಣೆ ಕೋರಿ ರಾಜೀವರು ಅವರಿಗೆ ನೋಟಿಸು ರವಾನಿಸಿದ್ದಾರೆ. ‘‘ತಂತ್ರಿ ಬಗ್ಗೆ ಟಿಡಿಬಿಗೆ ಪೂರ್ಣ ಪ್ರಮಾಣದ ನಂಬಿಕೆ ಇದೆ. ಬಿಜೆಪಿ ಪ್ರತಿಪಾದನೆಯನ್ನು ಅವರು ಸಾರ್ವಜನಿಕವಾಗಿ ನಿರಾಕರಿಸಿದ್ದಾರೆ ಹಾಗೂ ತನ್ನ ನಿಲುವನ್ನು ಸ್ಪಷ್ಟಪಡಿಸಿದ್ದಾರೆ. ನಾವು ಅವರನ್ನು ನಂಬುತ್ತೇವೆ ಹಾಗೂ ಅವರ ಪದಗಳಿಗೆ ಗೌರವ ನೀಡುತ್ತೇವೆ’’ ಎಂದು ಟಿಡಿಬಿ ಅಧ್ಯಕ್ಷ ಎ. ಪದ್ಮಕುಮಾರ್ ಅವರು ಹೇಳಿದ್ದಾರೆ.

‘‘ಏನು ನಡೆಯಿತು ಎಂಬ ಬಗ್ಗೆ ಸ್ಪಷ್ಟತೆ ಹೊಂದಲು ವಿವರಣೆ ಕೋರಲಾಗಿದೆ. ಇದು ಅರ್ಚಕರ ವಿರುದ್ಧ ಕ್ರಮದ ಯಾವುದೇ ಆರಂಭ ಅಲ್ಲ. ಇತ್ತೀಚೆಗಿನ ಟಿಡಿಬಿ ಸಭೆಯಲ್ಲಿ ಈ ಬಗ್ಗೆ ಚರ್ಚೆ ನಡೆಸಲಾಗಿದೆ. ಸಾಮಾನ್ಯವಾಗಿ ತಂತ್ರಿ ಅವರು ವಿವರಣೆಯನ್ನು 7 ದಿನಗಳ ಒಳಗೆ ಸಲ್ಲಿಸಬೇಕು’’ ಎಂದು ಮಂಡಳಿ ಮೂಲಗಳು ತಿಳಿಸಿವೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News