ಪಟಾಕಿ: ಸುಪ್ರೀಂ ಆದೇಶ ಉಲ್ಲಂಘಿಸಿದ 26 ಮಂದಿ ವಶ

Update: 2018-11-08 15:24 GMT

ಚಂಡಿಗಢ, ನ. 8: ದೀಪಾವಳಿ ಸಂದರ್ಭ ರಾತ್ರಿ 8 ಗಂಟೆಯಿಂದ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂದು ಸುಪ್ರೀಂ ಕೋರ್ಟ್ ನೀಡಿದ ಆದೇಶವನ್ನು ಪಂಜಾಬ್ ಹಾಗೂ ಹರ್ಯಾಣದಾದ್ಯಂತ ಹಲವು ನಗರಗಳಲ್ಲಿ ಉಲ್ಲಂಘಿಸಲಾಗಿದ್ದು, ಚಂಢೀಗಢದಿಂದ 26 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

 ಸುಪ್ರೀಂ ಕೋರ್ಟ್ ಆದೇಶ ಉಲ್ಲಂಘಿಸಿದ ಆರೋಪದಲ್ಲಿ ದೇಶದ ಅತಿ ಹೆಚ್ಚು ಮಾಲಿನ್ಯದ ನಗರಗಳಲ್ಲಿ ಒಂದಾದ ಲುಧಿಯಾನದಿಂದ 14 ಮಂದಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ. ಚಂಡಿಗಢದಲ್ಲಿ ಒಟ್ಟು 28 ಪ್ರಕರಣಗಳು ದಾಖಲಾಗಿವೆ ಎಂದು ಅವರು ತಿಳಿಸಿದ್ದಾರೆ. ದೀಪಾವಳಿ ಆಚರಣೆ ಬಳಿಕ ಎರಡೂ ರಾಜ್ಯಗಳಲ್ಲಿ ಗುರುವಾರ ಬೆಳಗ್ಗೆ ವಾಯು ಗುಣಮಟ್ಟ ಸೂಚ್ಯಾಂಕ ‘ಕಳಪೆ’ ಹಾಗೂ ‘ತುಂಬಾ ಕಳಪೆ’ ದಾಖಲಾಗಿದೆ. ಈ ಹಿಂದಿನ ವರ್ಷಕ್ಕೆ ಹೋಲಿಸಿದರೆ, ಈ ವರ್ಷ ದೀಪಾವಳಿಯ ಮರು ದಿನ ವಾಯು ಗುಣಮಟ್ಟ ಉತ್ತಮವಾಗಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿ ತಿಳಿಸಿದೆ.

 ಸುಪ್ರೀಂ ಕೋರ್ಟ್‌ನ ಆದೇಶ ಉಲ್ಲಂಘಿಸಿರುವುದಕ್ಕೆ ಸಂಬಂಧಿಸಿ ಅನಾಮಿಕ 14 ಮಂದಿಯ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಲುಧಿಯಾನದ ಪೊಲೀಸ್ ಆಯುಕ್ತ ಅಶ್ವನಿ ಕಪೂರ್ ತಿಳಿಸಿದ್ದಾರೆ. ರಾತ್ರಿ 8 ಗಂಟೆಯಿಂದ ರಾತ್ರಿ 10 ಗಂಟೆ ವರೆಗೆ ಮಾತ್ರ ಪಟಾಕಿ ಸಿಡಿಸಬೇಕು ಎಂಬ ಸುಪ್ರೀಂ ಕೋರ್ಟ್‌ನ ಆದೇಶದ ಬಗ್ಗೆ ಅರಿವಿರಬೇಕು ಎಂದು ದೀಪಾವಳಿ ಮುನ್ನ ಪೊಲೀಸರು ಜನರಲ್ಲಿ ಮನವಿ ಮಾಡಿದ್ದರು. ಆದರೂ, ಆದೇಶ ಉಲ್ಲಂಘಿಸಿದವರನ್ನು ಕೂಡಲೇ ಪರಿಶೀಲಿಸಲಾಗುವುದು ಹಾಗೂ ಅವರ ಹೆಸರನ್ನು ಪ್ರಥಮ ಮಾಹಿತಿ ವರದಿಯಲ್ಲಿ ಸೇರಿಸಲಾಗುವುದು ಎಂದು ಅವರು ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News