ಆಸಿಯಾ ಬೀಬಿ ಜೈಲಿನಿಂದ ಬಿಡುಗಡೆ: ವಕೀಲ

Update: 2018-11-08 15:46 GMT

ಇಸ್ಲಾಮಾಬಾದ್, ನ. 8: ದೇವನಿಂದನೆ ಪ್ರಕರಣದಲ್ಲಿ ಗಲ್ಲು ಶಿಕ್ಷೆಗೆ ಗುರಿಯಾಗಿ 8 ವರ್ಷಗಳನ್ನು ಜೈಲಿನಲ್ಲಿ ಕಳೆದ ಪಾಕಿಸ್ತಾನದ ಕ್ರೈಸ್ತ ಮಹಿಳೆ ಆಸಿಯಾ ಬೀಬಿಯನ್ನು ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರ ವಕೀಲರು ಹೇಳಿದ್ದಾರೆ.

ಆಸಿಯಾ ಬೀಬಿ ವಿಮಾನವೊಂದನ್ನು ಹತ್ತಿದ್ದಾರೆ, ಆದರೆ ಅದು ಎಲ್ಲಿಗೆ ಹೋಗಿದೆ ಎನ್ನುವುದು ಗೊತ್ತಿಲ್ಲ ಎಂಬುದಾಗಿ ಊಹಾಪೋಹಗಳಿವೆ ಎಂದು ಬಿಬಿಸಿ ಬುಧವಾರ ವರದಿ ಮಾಡಿದೆ.

ಆಸಿಯಾ ಬೀಬಿಯನ್ನು ದೇವನಿಂದನೆ ಪ್ರಕರಣದಲ್ಲಿ ದೋಷಮುಕ್ತಗೊಳಿಸಿದ ಸುಪ್ರೀಂ ಕೋರ್ಟ್‌ನ ತೀರ್ಪನ್ನು ವಿರೋಧಿಸಿರುವ ಕೆಲವು ತೀವ್ರವಾದಿ ಸಂಘಟನೆಗಳು ದೇಶಾದ್ಯಂತ ಹಿಂಸಾತ್ಮಕ ಪ್ರತಿಭಟನೆಗಳನ್ನು ನಡೆಸಿರುವುದನ್ನು ಸ್ಮರಿಸಬಹುದಾಗಿದೆ.

ಪ್ರತಿಭಟನೆಗೆ ಮಣಿದ ಪಾಕಿಸ್ತಾನವು, ಆಸಿಯಾ ಬೀಬಿ ದೇಶ ಬಿಟ್ಟು ಹೋಗದಂತೆ ನೋಡಿಕೊಳ್ಳುವುದಾಗಿ ತಿಳಿಸಿದೆ.

ಐವರು ಮಕ್ಕಳ ತಾಯಿ ಆಸಿಯಾರನ್ನು ಮುಲ್ತಾನ್‌ನಲ್ಲಿರುವ ಜೈಲಿನಿಂದ ಬಿಡುಗಡೆ ಮಾಡಲಾಗಿದೆ ಎಂದು ಅವರ ವಕೀಲ ಸೈಫ್ ಮುಲೂಕ್ ತಿಳಿಸಿದರು.

ಅವರ ವಿರುದ್ಧದ ದೇವನಿಂದನೆ ಆರೋಪವು 2010ರಲ್ಲಿ ಸಾಬೀತಾಗಿತ್ತು.

ಅವರಿಗೆ ಆಶ್ರಯ ನೀಡಲು ಹಲವು ದೇಶಗಳು ಮುಂದೆ ಬಂದಿವೆ.

ಒಳಗೆ ಬಾಕ್ಸ್

ಈಗಲೂ ಪಾಕಿಸ್ತಾನದಲ್ಲಿ: ಸರಕಾರ

ಸುಪ್ರೀಂ ಕೋರ್ಟ್ ತೀರ್ಪಿಗೆ ಅನುಗುಣವಾಗಿ ಜೈಲಿನಿಂದ ಬಿಡುಗಡೆಗೊಂಡಿರುವ ಆಸಿಯಾ ಬೀಬಿ ದೇಶ ತೊರೆದಿಲ್ಲ ಎಂದು ಪಾಕಿಸ್ತಾನ ಸರಕಾರ ಗುರುವಾರ ತಿಳಿಸಿದೆ.

ಆಸಿಯಾ ಈಗಲೂ ಪಾಕಿಸ್ತಾನದಲ್ಲಿದ್ದಾರೆ ಎಂದು ವಿದೇಶ ಸಚಿವಾಲಯದ ವಕ್ತಾರ ಮುಹಮ್ಮದ್ ಫೈಝಲ್ ಹೇಳಿದರು.

ಮುಲ್ತಾನ್ ಜೈಲಿನಿಂದ ಬಿಡುಗಡೆಯಾದ ಬಳಿಕ ಅವರು ದೇಶ ಬಿಟ್ಟು ಹೋಗಿದ್ದಾರೆ ಎಂಬ ಊಹಾಪೋಹಗಳನ್ನು ಅವರು ತಳ್ಳಿಹಾಕಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News