ಸಾಂವಿಧಾನಿಕ ಬಿಕ್ಕಟ್ಟು ನಿವಾರಣೆಗೆ ಸಂಸತ್ತಿನಲ್ಲಿ ಬಲಾಬಲ ಅಗತ್ಯ: ಶ್ರೀಲಂಕಾ ಸ್ಪೀಕರ್ ಕರು ಜಯಸೂರಿಯ

Update: 2018-11-08 15:51 GMT

ಕೊಲಂಬೊ, ನ. 8: ದೇಶದಲ್ಲಿ ಇಬ್ಬರು ಪ್ರಧಾನಿಗಳು ಇರುವ ಸಮಸ್ಯೆಯನ್ನು ನಿವಾರಿಸಲು ಸಂಸತ್ತಿನಲ್ಲಿ ಬಲಾಬಲ ಪರೀಕ್ಷೆ ನಡೆಯುವುದು ಅಗತ್ಯವಾಗಿದೆ ಎಂದು ಶ್ರೀಲಂಕಾ ಸಂಸತ್ತಿನ ಸ್ಪೀಕರ್ ಕರು ಜಯಸೂರಿಯ ಬುಧವಾರ ಹೇಳಿದ್ದಾರೆ.

ಅಧ್ಯಕ್ಷ ಮೈತ್ರಿಪಾಲ ಸಿರಿಸೇನ ಕಳೆದ ತಿಂಗಳ ಕೊನೆಯಲ್ಲಿ ಪ್ರಧಾನಿ ರನಿಲ್ ವಿಕ್ರಮೆಸಿಂಘೆಯನ್ನು ವಜಾಗೊಳಿಸಿ, ಅವರ ಸ್ಥಾನದಲ್ಲಿ ಮಾಜಿ ಅಧ್ಯಕ್ಷ ಮಹಿಂದ ರಾಜಪಕ್ಸರನ್ನು ನೇಮಿಸಿದ ಬಳಿಕ ದ್ವೀಪ ರಾಷ್ಟ್ರದಲ್ಲಿ ಅತಂತ್ರ ಪರಿಸ್ಥಿತಿ ನೆಲೆಸಿರುವುದನ್ನು ಸ್ಮರಿಸಬಹುದಾಗಿದೆ.

ಅಧಿಕಾರ ತೊರೆಯಲು ನಿರಾಕರಿಸಿರುವ ವಿಕ್ರಮೆಸಿಂಘೆ, ನಾನಿನ್ನೂ ದೇಶದ ಪ್ರಧಾನಿಯಾಗಿದ್ದೇನೆ ಹಾಗೂ ನನ್ನ ಬಹುಮತವನ್ನು ಸಂಸತ್ತಿನಲ್ಲಿ ಸಾಬೀತುಪಡಿಸುತ್ತೇನೆ ಎಂದು ಹೇಳಿದ್ದಾರೆ.

ವಿಕ್ರಮಸಿಂಘೆಯನ್ನು ವಜಾಗೊಳಿಸುವ ಹಾಗೂ ಸಂಸತ್ತನ್ನು ಅಮಾನತಿನಲ್ಲಿಡುವ ಅಧ್ಯಕ್ಷರ ಕ್ರಮವು ‘ಪ್ರಜಾಪ್ರಭುತ್ವ ವಿರೋಧಿ’ಯಾಗಿದೆ ಎಂಬುದಾಗಿ ಇದಕ್ಕೂ ಮುನ್ನ ಸ್ಪೀಕರ್ ಹೇಳಿರುವುದನ್ನು ಸ್ಮರಿಸಬಹುದಾಗಿದೆ.

ಸಂಸತ್ತಿನಲ್ಲಿ ಬಲಾಬಲ ಪರೀಕ್ಷೆಯಲ್ಲಿ ಸಾಬೀತಾಗದೆ, ಮಹಿಂದ ರಾಜಪಕ್ಸರನ್ನು ನಾನು ಪ್ರಧಾನಿ ಎಂಬುದಾಗಿ ಮಾನ್ಯ ಮಾಡುವುದಿಲ್ಲ ಎಂಬುದಾಗಿಯೂ ಜಯಸೂರಿಯ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News