ಎಟಿಎಂ ಮುಂದೆ ನಿಂತು ಸಾವನ್ನಪ್ಪಿದವರನ್ನು ದೇಶ ಎಂದೂ ಮರೆಯದು: ರಾಹುಲ್

Update: 2018-11-08 17:23 GMT

ಹೊಸದಿಲ್ಲಿ, ನ.8: ನೋಟು ರದ್ದತಿ ಎಂಬುದು ಸ್ವಯಂ ನಿರ್ಮಿತ ದುರಂತವಾಗಿದ್ದು, ದೇಶದ ಮಿಲಿಯಾಂತರ ಜನರ ಬದುಕಿನ ಮೇಲೆ ನಡೆಸಿದ ಆತ್ಮಹತ್ಯಾ ದಾಳಿಯಾಗಿದೆ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.

ನೋಟು ರದ್ದತಿಯ ಎರಡನೇ ವರ್ಷಾಚರಣೆ ಸಂದರ್ಭ ಹೇಳಿಕೆ ನೀಡಿರುವ ರಾಹುಲ್, ನವೆಂಬರ್ 8 ಭಾರತದ ಇತಿಹಾಸದಲ್ಲಿ ನಿರಾಶಾದಾಯಕ ದಿನವೆಂದು ದಾಖಲಾಗಲಿದೆ. ಈ ದಿನದಂದು ಪ್ರಧಾನಿ ಮೋದಿ ದೇಶದ ಮೇಲೆ ನೋಟು ರದ್ದತಿ ಎಂಬ ದಬ್ಬಾಳಿಕೆಯನ್ನು ನಡೆಸಿದರು. ನವೆಂಬರ್ 8ರಂದು ರಾತ್ರಿ 8 ಗಂಟೆಗೆ ಟಿವಿ ಪರದೆಯ ಮೇಲೆ ಕಾಣಿಸಿಕೊಂಡ ಮೋದಿ ಏಕಪಕ್ಷೀಯ ಘೋಷಣೆ ಮಾಡಿದರು. ಇದಕ್ಕೆ ಮೋದಿಯವರ ಆರ್ಥಿಕ ಸಲಹೆಗಾರರ ಬೆಂಬಲವೂ ಇರಲಿಲ್ಲ. ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ.86ರಷ್ಟು ಕರೆನ್ಸಿಯನ್ನು ಮೋದಿ ಹಿಂಪಡೆದರು. ಇದರಿಂದ ದೇಶದ ಅರ್ಥವ್ಯವಸ್ಥೆ ಸ್ಥಗಿತಗೊಂಡಿತು ಎಂದರು.

ನೋಟು ಬದಲಿಸಿಕೊಳ್ಳಲು ಸರತಿ ಸಾಲಿನಲ್ಲಿ ನಿಂತು ಸಾವನ್ನಪ್ಪಿದ 120ಕ್ಕೂ ಅಧಿಕ ಭಾರತೀಯರನ್ನು ಈ ದೇಶ ಎಂದಿಗೂ ಮರೆಯದು ಎಂದ ಅವರು, ಈ ಹಿಂದೆಯೂ ದೇಶ ಹಲವು ದುರಂತಗಳನ್ನು ಎದುರಿಸಿದೆ. ಆದರೆ ನೋಟು ರದ್ದತಿ ಇದೆಲ್ಲವನ್ನೂ ಮೀರಿಸಿದ ದುರಂತವಾಗಿದೆ. ಇದು ದೇಶದ ಮಿಲಿಯಾಂತರ ಸಣ್ಣ ಉದ್ದಿಮೆಗಳನ್ನು ವಿನಾಶಗೊಳಿಸಿತು ಎಂದರು. ನೋಟು ರದ್ದತಿ ಎಂಬುದು ಗೊತ್ತುಪಾಡಿಲ್ಲದ ವಿಪತ್ತು ಆಗಿದ್ದು, ಉದ್ದೇಶಿತ ಗುರಿಯಲ್ಲಿ ಒಂದು ಅಂಶವನ್ನೂ ಸಾಧಿಸಲು ವಿಫಲವಾಗಿದೆ ಎಂದು ವಿಶ್ವದಾದ್ಯಂತದ ಆರ್ಥಿಕ ತಜ್ಞರು ಅಭಿಪ್ರಾಯಪಟ್ಟಿದ್ದರು ಎಂದು ರಾಹುಲ್ ನುಡಿದರು.

ಪ್ರಧಾನಿಯವರ ಚಿರಸ್ಥಾಯೀ ಪ್ರಮಾದದ ದ್ವಿತೀಯ ವರ್ಷಾಚರಣೆಯ ಸಂದರ್ಭ ನಮ್ಮ ಅಸಮರ್ಥ ವಿತ್ತ ಸಚಿವರೂ ಸೇರಿದಂತೆ ಸರಕಾರದ ಹೊಗಳುಭಟರು ಕ್ರಿಮಿನಲ್ ಕಾರ್ಯನೀತಿಯನ್ನು ಸಮರ್ಥಿಸಿಕೊಳ್ಳುತ್ತಿದ್ದಾರೆ. ನೋಟು ರದ್ದತಿ ಎಂಬುದು ದುರುದ್ದೇಶಪೂರಿತ, ಕೆಟ್ಟದಾಗಿ ಅನುಷ್ಠಾನಗೊಳಿಸಲಾದ ಕ್ರಿಮಿನಲ್ ಹಗರಣ ಎಂಬ ಸತ್ಯವನ್ನು ಸರಕಾರ ಅಡಗಿಸಿಡಲು ವ್ಯರ್ಥ ಪ್ರಯತ್ನ ನಡೆಸುತ್ತಿದೆ ಎಂದವರು ಟೀಕಿಸಿದರು. ನೋಟು ರದ್ದತಿಯ ಹಿಂದಿರುವ ಪೂರ್ಣ ಸತ್ಯ ಬಯಲಾಗುವವರೆಗೆ ಭಾರತೀಯರು ವಿಶ್ರಾಂತಿ ಪಡೆಯುವುದಿಲ್ಲ ಎಂದು ರಾಹುಲ್ ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News