ವರ್ಲ್ಡ್ ಕಪ್‌ಗೆ 18 ಮಂದಿ ಸದಸ್ಯರ ಭಾರತ ತಂಡ ಪ್ರಕಟ

Update: 2018-11-08 18:20 GMT

ಹೊಸದಿಲ್ಲಿ, ನ.8: ಭುವನೇಶ್ವರದಲ್ಲಿ ನಡೆಯಲಿರುವ ಪುರುಷರ ಎಫ್‌ಐಎಚ್ ಒಡಿಶಾ ಹಾಕಿ ವಿಶ್ವಕಪ್ ಭಾರತದ ಹಾಕಿ ತಂಡವನ್ನು ಹಾಕಿ ಇಂಡಿಯಾ (ಎಚ್ ಐ) ಗುರುವಾರ ಪ್ರಕಟಿಸಿದೆ. 18 ಮಂದಿ ಸದಸ್ಯರ ಭಾರತದ ಹಾಕಿ ತಂಡದಲ್ಲಿ ಎಸ್ .ವಿ. ಸುನೀಲ್, ರೂಪೇಂದರ್ ಸಿಂಗ್ ಮತ್ತು ರಮಣದೀಪ್ ಸಿಂಗ್ ಅವರಂತಹ ಖ್ಯಾತ ಆಟಗಾರರು ಸ್ಥಾನ ಪಡೆದಿಲ್ಲ.

ಸುನೀಲ್ ಏಶ್ಯನ್ ಚಾಂಪಿಯನ್ಸ್ ಟ್ರೋಫಿಗೆ ರಾಷ್ಟ್ರೀಯ ಶಿಬಿರದಲ್ಲಿ ಅಭ್ಯಾಸ ನಡೆಸುತ್ತಿದ್ದ ವೇಳೆ ಗಾಯಗೊಂಡಿದ್ದರು. ರಮಣದೀಪ್ ಇನ್ನೂ ಗಾಯದಿಂದ ಚೇತರಿಸಿಕೊಂಡಿಲ್ಲ. ಆದರೆ ರೂಪೇಂದರ್ ಸಿಂಗ್ ಅವರನ್ನು ತಂಡದಿಂದ ಕೈ ಬಿಟ್ಟಿರುವ ವಿಚಾರದಲ್ಲಿ ಹಾಕಿ ಇಂಡಿಯಾ ಕಾರಣ ನೀಡಿಲ್ಲ.

ಫಿಟ್ನೆಸ್ ಸಮಸ್ಯೆಯಿಂದ ಹೊರ ಬಂದಿರುವ ಬೀರೇಂದ್ರ ಲಕ್ರಾ ಅವರು ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಒಡಿಶಾದ ಸ್ಥಳೀಯ ಆಟಗಾರ ಅಮಿತ್ ರೋಹಿದಾಸ್ ತಂಡದಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್‌ತಂಡವನ್ನು ವಿಶ್ವಕಪ್‌ನಲ್ಲಿ ನಾಯಕರಾಗಿ ಮುನ್ನಡೆಸುವರು. ಚಿಂಗ್ಲೆನ್ಸನಾ ತಂಡದಲ್ಲಿ ಉಪನಾಯಕರಾಗಿ ಮುಂದುವರಿಯಲಿದ್ದಾರೆ.

ಯುವ ಆಟಗಾರರಾದ ನೀಲಕಂಠ ಶರ್ಮಾ ಮತ್ತು ಹಾರ್ದಿಕ್ ಸಿಂಗ್ ತಂಡಕ್ಕೆ ಅಚ್ಚರಿಯ ಆಯ್ಕೆ. ಡಿಫೆಂಡರ್‌ಗಳ ಪೈಕಿ ಹರ್ಮನ್‌ಪ್ರೀತ್ ಸಿಂಗ್ ಅವರು ಏಕೈಕ ಡ್ರಾಗ್ ಫ್ಲೀಕರ್. ಅನುಭವಿಗಳಾದ ಸುನೀಲ್ ಮತ್ತು ರಮಣ್‌ದೀಪ್ ಸೇವೆಯಿಂದ ಭಾರತ ವಂಚಿತಗೊಂಡಿದೆ.

ಸಿ’ ಗುಂಪಿನಲ್ಲಿ ಭಾರತ ಬೆಲ್ಜಿಯಂ, ಕೆನಡಾ ಮತ್ತು ದಕ್ಷಿಣ ಆಫ್ರಿಕ ತಂಡದೊಂದಿಗೆ ಭಾರತ ಸ್ಥಾನ ಪಡೆದಿದೆ. ನ.28ರಂದು ಮೊದಲ ಪಂದ್ಯದಲ್ಲಿ ದಕ್ಷಿಣ ಆಫ್ರಿಕವನ್ನು ಎದುರಿಸಲಿದೆ. ಫೈನಲ್ ಪಂದ್ಯ ಡಿ.16ರಂದು ನಡೆಯಲಿದೆ.

ನಾಲ್ಕು ಗುಂಪುಗಳಲ್ಲಿ ಅಗ್ರ ಸ್ಥಾನ ಪಡೆಯುವ ತಂಡಗಳು ನೇರವಾಗಿ ಕ್ವಾರ್ಟರ್ ಫೈನಲ್ ಪ್ರವೇಶಿಸಲಿವೆ. ಗುಂಪಿನಲ್ಲಿ ಕೊನೆಯ ಸ್ಥಾನ ಪಡೆಯುವ ತಂಡಗಳು ಕೂಟದಿಂದ ಹೊರ ನಡೆಯಲಿದೆ. 2 ಮತ್ತು 3ನೇ ಸ್ಥಾನ ಪಡೆಯುವ ತಂಡಗಳು ಕ್ವಾರ್ಟರ್ ಫೈನಲ್‌ಗೆ ತಲುಪಲು ಕ್ರಾಸ್ -ಓವರ್ ಪಂದ್ಯಗಳಲ್ಲಿ ಹಣಾಹಣಿ ನಡೆಸಲಿವೆ.

34 ಮಂದಿಯ ಪ್ರಾಥಮಿಕ ತಂಡದಿಂದ ಇದೀಗ 18 ಮಂದಿಯನ್ನು ವಿಶ್ವಕಪ್ ಅಂತಿಮ ತಂಡಕ್ಕೆ ಆಯ್ಕೆ ಮಾಡಲಾಗಿದೆ.ಅನುಭವಿ ಹಾಗೂ ಯುವ ಆಟಗಾರರಿಗೆ ತಂಡದಲ್ಲಿ ಅವಕಾಶ ನೀಡಲಾಗಿದೆ ಎಂದು ಕೋಚ್ ಹರೀಂದರ್ ಸಿಂಗ್ ಮಾಹಿತಿ ನೀಡಿದ್ದಾರೆ.

ಭಾರತದ ಹಾಕಿ ತಂಡ

►ಗೋಲ್ ಕೀಪರ್ಸ್‌: ಪಿ.ಆರ್.ಶ್ರೀಜೇಶ್, ಕೃಶನ್ ಬಹಾದೂರ್ ಪಾಠಕ್.

►ಡಿಫೆಂಡರ್ಸ್‌: ಹರ್ಮನ್‌ಪ್ರೀತ್ ಸಿಂಗ್, ಬಿರೇಂದ್ರ ಲಕ್ರಾ, ವರುಣ್ ಕುಮಾರ್, ಕೋಥಾಜಿತ್ ಸಿಂಗ್, ಸುರೇಂದರ್ ಕುಮಾರ್, ಅಮಿತ್ ರೋಹಿದಾಸ್.

►ಮಿಡ್‌ಫೀಲ್ಡರ್ಸ್‌: ಮನ್‌ಪ್ರೀತ್ ಸಿಂಗ್(ನಾಯಕ), ಚಿಂಗ್ಲೆನ್ಸನಾ ಸಿಂಗ್(ಉಪನಾಯಕ), ನೀಲಕಂಠ ಶರ್ಮಾ, ಹಾರ್ದಿಕ್ ಸಿಂಗ್, ಸುಮೀತ್.

►ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಮನ್‌ದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್, ಲಲಿತ್ ಕುಮಾರ್ ಉಪಾಧ್ಯಾಯ, ಸಿಮ್ರನ್‌ಜಿತ್ ಸಿಂಗ್.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News