ಐಪಿಎಲ್‌ನಲ್ಲಿ ವೇಗಿಗಳಿಗೆ ವಿಶ್ರಾಂತಿ: ಕೊಹ್ಲಿ ಸಲಹೆಗೆ ಫ್ರಾಂಚೈಸಿಗಳ ಬೆಂಬಲವಿಲ್ಲ?
ಹೊಸದಿಲ್ಲಿ, ನ.8: ವಿಶ್ವಕಪ್ ಕ್ರಿಕೆಟ್ ಟೂರ್ನಿಯ ಹಿನ್ನೆಲೆಯಲ್ಲಿ ಮುಂಬರುವ ಐಪಿಎಲ್ ಟೂರ್ನಿಯಲ್ಲಿ ಪ್ರಧಾನ ವೇಗದ ಬೌಲರ್‌ಗಳಿಗೆ ವಿಶ್ರಾಂತಿ ನೀಡಬೇಕೆಂಬ ಭಾರತ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಸಲಹೆಗೆ ಐಪಿಎಲ್ ಪ್ರಾಂಚೈಸಿಗಳಿಂದ ಬೆಂಬಲ ದೊರಕುವ ಸಾಧ್ಯತೆ ಇಲ್ಲ ಎನ್ನಲಾಗುತ್ತಿದೆ. ಇತ್ತೀಚೆಗೆ ಹೈದರಾಬಾದ್‌ನಲ್ಲಿ ನಡೆದಿದ್ದ ಭಾರತ ಕ್ರಿಕೆಟ್ ತಂಡದ ಆಡಳಿತಗಾರರ ಸಮಿತಿ(ಸಿಒಎ) ಸಭೆಯಲ್ಲಿ ಈ ವಿಷಯ ಪ್ರಸ್ತಾವಿಸಿದ್ದ ಕೊಹ್ಲಿ, ಭಾರತದ ಪ್ರಧಾನ ವೇಗಿಗಳಿಗೆ, ಅದರಲ್ಲೂ ವಿಶೇಷವಾಗಿಜಸ್‌ಪ್ರೀತ್ ಬುಮ್ರಾ ಹಾಗೂ ಭುವನೇಶ್ವರ ಕುಮಾರ್‌ಗೆಇಡೀ ಐಪಿಎಲ್ ಟೂರ್ನಿಯಿಂದ ವಿಶ್ರಾಂತಿ ನೀಡಬೇಕೆಂದು ಸಲಹೆ ನೀಡಿದ್ದರು. ಆದರೆ ಕೊಹ್ಲಿ ಸಲಹೆಗೆ ಸಭೆಯಲ್ಲಿ ಹೆಚ್ಚಿನವರ ಬೆಂಬಲ ದೊರಕಿಲ್ಲ ಎಂದು ಸಿಒಎ ಅಧಿಕಾರಿ ತಿಳಿಸಿದ್ದಾರೆ.
ಮುಂದಿನ ವರ್ಷದ ಮಾರ್ಚ್ 29ರಿಂದ ಐಪಿಎಲ್ ಆರಂಭವಾಗಿ ಮೇ 19ರಂದು ಕೊನೆಗೊಳ್ಳುತ್ತದೆ. ವಿಶ್ವಕಪ್ ಟೂರ್ನಿಯಲ್ಲಿ ಭಾರತದ ಪ್ರಥಮ ಪಂದ್ಯ ಜೂನ್ 5ರಂದು ದಕ್ಷಿಣ ಆಫ್ರಿಕಾ ಎದುರು ನಡೆಯಲಿದೆ. ಇಲ್ಲಿ ಕನಿಷ್ಠ 15 ದಿನದ ಅಂತರವಿರುವ ಕಾರಣ ವೇಗಿಗಳಿಗೆ ಐಪಿಎಲ್ ಟೂರ್ನಿಯಿಂದಲೇ ವಿಶ್ರಾಂತಿ ನೀಡುವ ಸಾಧ್ಯತೆ ಇಲ್ಲ ಎಂದು ಅಧಿಕಾರಿ ತಿಳಿಸಿದ್ದಾರೆ. ಸಭೆಯಲ್ಲಿ ಪಾಲ್ಗೊಂಡಿದ್ದ ಏಕದಿನ ಪಂದ್ಯಗಳ ಉಪನಾಯಕ ರೋಹಿತ್ ಕೂಡಾ ಕೊಹ್ಲಿ ಸಲಹೆಯನ್ನು ಒಪ್ಪಲಿಲ್ಲ. ಒಂದು ವೇಳೆ ಮುಂಬೈ ಇಂಡಿಯನ್ಸ್ ತಂಡ ಪ್ಲೇ ಆಫ್ ಸುತ್ತು ಅಥವಾ ಫೈನಲ್ ಹಂತಕ್ಕೆ ತಲುಪಿದರೆ ಆಗ ನಾನು ಬುಮ್ರಾಗೆ ವಿಶ್ರಾಂತಿ ನೀಡಲು ಒಪ್ಪಲಾರೆ ಎಂದು ಶರ್ಮ ಹೇಳಿದ್ದರು ಎಂದು ಐಒಎ ಅಧಿಕಾರಿ ತಿಳಿಸಿದ್ದಾರೆ. ಐಪಿಎಲ್‌ನಲ್ಲಿ ಗರಿಷ್ಠ 14 ಪಂದ್ಯಗಳಿವೆ (ಫೈನಲ್ ಸೇರಿ). ಭುವನೇಶ್ವರ್ ಹಾಗೂ ಬುಮ್ರಾ ಹೊರತುಪಡಿಸಿ ಇತರ ಪ್ರಧಾನ ವೇಗಿಗಳಾದ ಮುಹಮ್ಮದ್ ಶಮಿ, ಉಮೇಶ್ ಯಾದವ್, ಖಲೀಲ್ ಅಹ್ಮದ್ ಎಲ್ಲಾ ಪಂದ್ಯಗಳನ್ನು ಆಡುವ ಸಾಧ್ಯತೆ ಕಡಿಮೆ. ಅಲ್ಲದೆ ಪ್ರಧಾನ ವೇಗಿಗಳನ್ನು ಹೊರಗಿಟ್ಟರೆ ಅವರಿಗೆ ಅಭ್ಯಾಸದ ಕೊರತೆ ಎದುರಾಗಬಹುದು. ಐಪಿಲ್ ಟೂರ್ನಿ ಆಟಗಾರರಿಗೆ ವಿಶ್ವಕಪ್‌ಗೂ ಮುನ್ನ ದೊರಕುವ ಪ್ರಮುಖ ಅಭ್ಯಾಸ ಪಂದ್ಯವಾಗಲಿದೆ ಎಂದು ಅವರು ವಿವರಿಸಿದ್ದಾರೆ.