ಮೊದಲ ಏಕದಿನ :ಕಿವೀಸ್‌ಗೆ 47 ರನ್‌ಗಳ ಜಯ

Update: 2018-11-08 18:29 GMT

ಅಬುಧಾಬಿ, ನ.8: ಇಲ್ಲಿ ನಡೆದ ಮೊದಲ ಏಕದಿನ ಅಂತರ್ ರಾಷ್ಟ್ರೀಯ ಪಂದ್ಯದಲ್ಲಿ ಟ್ರೆಂಟ್ ಬೌಲ್ಟ್ ಹ್ಯಾಟ್ರಿಕ್ ನೆರವಿನಲ್ಲಿ ಪಾಕಿಸ್ತಾನ ವಿರುದ್ಧ ನ್ಯೂಝಿಲೆಂಡ್47 ರನ್‌ಗಳ ಜಯ ಗಳಿಸಿದೆ.

ಶೈಖ್ ಝಾಯಿದ್ ಸ್ಟೇಡಿಯಂನಲ್ಲಿ ನಡೆದ ಪಂದ್ಯದಲ್ಲಿ ಗೆಲುವಿಗೆ 267 ರನ್‌ಗಳ ಸವಾಲನ್ನು ಪಡೆದ ಪಾಕಿಸ್ತಾನ ತಂಡ 47.2 ಓವರ್‌ಗಳಲ್ಲಿ 219 ರನ್‌ಗಳಿಗೆ ಆಲೌಟಾಗಿದೆ. ಈ ಗೆಲುವಿನೊಂದಿಗೆ ನ್ಯೂಝಿಲೆಂಡ್ ತಂಡ 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಸಾಧಿಸಿದೆ. ಪಾಕಿಸ್ತಾನ ಆರಂಭದಲ್ಲೇ ಆಘಾತ ಅನುಭವಿಸಿತ್ತು. ಬೌಲ್ಟ್ ಅವರು 3ನೇ ಓವರ್‌ನ ಎರಡನೇ ಎಸೆತದಲ್ಲಿ ಪಾಕಿಸ್ತಾನದ ಆರಂಭಿಕ ದಾಂಡಿಗ ಫಾಕರ್ ಝಮಾನ್(1) ಅವರನ್ನು ಪೆವಿಲಿಯನ್‌ಗೆಅಟ್ಟಿದರು. ಮುಂದಿನ ಎಸೆತದಲ್ಲಿ ಬಾಬರ್ ಅಝಮ್ (0) ಎದುರಿಸಿದ ಮೊದಲ ಎಸೆತದಲ್ಲಿ ರಾಸ್ ಟೇಲರ್‌ಗೆ ಕ್ಯಾಚ್ ನೀಡಿದರು. ಅದೇ ಓವರ್‌ನ ನಾಲ್ಕನೇ ಎಸೆತದಲ್ಲಿ ಮುಹಮ್ಮದ್ ಹಫೀಝ್ (0) ಅವರನ್ನು ಬೌಲ್ಟ್ ಎಲ್‌ಬಿಡಬ್ಲು ಬಲೆಗೆ ಬೀಳಿಸಿದರು. ಇದರೊಂದಿಗೆ ಪಾಕಿಸ್ತಾನ 2.4 ಓವರ್‌ಗಳಲ್ಲಿ 8 ರನ್‌ಗಳಿಗೆ 3 ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತ್ತು. ಇಮಾಮ್ ಉಲ್ ಹಕ್ ಮತ್ತು ಶುಐಬ್ ಮಲಿಕ್ ತಂಡದ ಬ್ಯಾಟಿಂಗ್‌ನ್ನು ಮುನ್ನಡೆಸಿ 4ನೇ ವಿಕೆಟ್‌ಗೆ 63 ರನ್ ಸೇರಿಸಿದರು. ಇಮಾಮ್ ಉಲ್ ಹಕ್ 34 ರನ್, ಶುಐಬ್ ಮಲಿಕ್ 30 ರನ್, ಶಾದಾಬ್ ಖಾನ್ 7 ರನ್ ಗಳಿಸಿ ಔಟಾದರು.

6 ವಿಕೆಟ್ ನಷ್ಟದಲ್ಲಿ 85 ರನ್ ಗಳಿಸಿದ್ದ ಪಾಕಿಸ್ತಾನದ ಬ್ಯಾಟಿಂಗ್‌ನ್ನು ನಾಯಕ ಸರ್ಫರಾಝ್ ಅಹ್ಮದ್ ಮತ್ತು ಇಮಾದ್ ವಸೀಮ್ ಮುನ್ನಡೆಸಿ 7ನೇ ವಿಕೆಟ್‌ಗೆ 103 ರನ್‌ಗಳ ಜೊತೆಯಾಟ ನೀಡಿದರು. ನಾಯಕ ಸರ್ಫರಾಜ್ ಅಹ್ಮದ್ 64 ರನ್ ಮತ್ತು ಇಮಾದ್ ವಸೀಮ್ 50 ರನ್ ಗಳಿಸಿದರು. ಇವರ ನಿರ್ಗಮನದ ಬಳಿಕ ಪಾಕಿಸ್ತಾನ ಹೋರಾಟ ಬಹುತೇಕ ಅಂತ್ಯಗೊಂಡಿತು. ಹಸನ್ ಅಲಿ 16 ರನ್ ಮತ್ತು ಶಾಹಿನ್ ಅಫ್ರಿದಿ ಖಾತೆ ತೆರೆಯದೆ ನಿರ್ಗಮಿಸಿದರು. ಇದಕ್ಕೂ ಮೊದಲು ಟಾಸ್ ಜಯಿಸಿ ಬ್ಯಾಟಿಂಗ್ ಆಯ್ದುಕೊಂಡ ನ್ಯೂಝಿಲೆಂಡ್ ತಂಡ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 266 ರನ್ ಗಳಿಸಿತ್ತು.

ರಾಸ್ ಟೇಲರ್(80) ಮತ್ತು ಟಾಮ್ ಲಥಾಮ್ (68) ಅರ್ಧಶತಕ ದಾಖಲಿಸಿದರು. ಪಾಕಿಸ್ತಾನದ ಶಾಹಿನ್ ಅಫ್ರಿದಿ ಮತ್ತು ಶಾದಾಬ್ ಖಾನ್ ತಲಾ 4 ವಿಕೆಟ್‌ಗಳನ್ನು ಹಂಚಿಕೊಂಡರು.

ಸಂಕ್ಷಿಪ್ತ ಸ್ಕೋರ್ ವಿವರ

►ನ್ಯೂಝಿಲೆಂಡ್ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟದಲ್ಲಿ 266(ರಾಸ್ ಟೇಲರ್ 80, ಟಾಮ್ ಲಥಾಮ್ 68; ಶಾದಾಬ್ ಖಾನ್ 38ಕ್ಕೆ 4, ಶಾಹಿನ್ ಅಫ್ರಿದಿ 46ಕ್ಕೆ 4).

►ಪಾಕಿಸ್ತಾನ 47.2 ಓವರ್‌ಗಳಲ್ಲಿ ಆಲೌಟ್ 219(ಸರ್ಫರಾಝ್ 64, ಇಮಾದ್ 50; ಫರ್ಗ್ಯುಸನ್ 36ಕ್ಕೆ 3, ಬೌಲ್ಟ್ 54ಕ್ಕೆ 3)

►ಪಂದ್ಯಶ್ರೇಷ್ಠ: ಟ್ರೆಂಟ್ ಬೌಲ್ಟ್

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News