ನೋಟು ಅಮಾನ್ಯೀಕರಣಕ್ಕೆ 2 ವರ್ಷ ಹಿನ್ನೆಲೆಯಲ್ಲಿ ಕಾಂಗ್ರೆಸ್‌ನಿಂದ ಪ್ರತಿಭಟನೆ

Update: 2018-11-09 10:28 GMT

ಮಂಗಳೂರು, ನ.9: ಜಗತ್ತಿನಲ್ಲಿ ಸುಳ್ಳು ಹೇಳುವ ಪಕ್ಷವೊಂದಿದ್ದರೆ ಅದು ಬಿಜೆಪಿ ಮಾತ್ರ. ಬಿಜೆಪಿಗರಿಗೆ ಸುಳ್ಳು ಹೇಳಿ ಗೊತ್ತಿದೆಯೇ ವಿನಃ ಆಡಳಿತ ನಡೆಸಿ ಗೊತ್ತಿಲ್ಲ. ಸುಳ್ಳೇ ಬಿಜೆಪಿಗರ ಬಂಡವಾಳ. ಇಂತಹ ಪಕ್ಷವನ್ನು ಅಧಿಕಾರದಿಂದ ಕಿತ್ತೊಗೆದರೆ ಮಾತ್ರ ದೇಶದಲ್ಲಿ ಶಾಂತಿ-ನೆಮ್ಮದಿ ನೆಲೆಸಲು ಸಾಧ್ಯ ಎಂದು ಮಾಜಿ ಸಚಿವ ಬಿ.ರಮಾನಾಥ ರೈ ಹೇಳಿದರು.

ನೋಟು ಅಮಾನ್ಯೀಕರಣಕ್ಕೆ 2 ವರ್ಷ ತುಂಬಿದ ಹಿನ್ನಲೆಯಲ್ಲಿ ಮತ್ತು ವಿಜಯಾ ಬ್ಯಾಂಕನ್ನು ವಿಲೀನಗೊಳಿಸುವ ಪ್ರಕ್ರಿಯೆಯನ್ನು ಖಂಡಿಸಿ ದ.ಕ. ಜಿಲ್ಲಾ ಕಾಂಗ್ರೆಸ್ ವತಿಯಿಂದ ಪಕ್ಷದ ಕಚೇರಿ ಎದುರು ಶುಕ್ರವಾರ ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಅವರು ಮಾತನಾಡಿದರು.

2016ರಲ್ಲಿ ನೋಟು ನಿಷೇಧಿಸುವ ಮುನ್ನ ಬಿಜೆಪಿಗರು ವಿದೇಶದಿಂದ ಕಪ್ಪು ಹಣ ವಾಪಸ್ ತರುತ್ತೇವೆ, ಭಯೋತ್ಪಾದನೆಯನ್ನು ನಿಗ್ರಹಿಸುತ್ತೇವೆ ಎಂದಿದ್ದರು. ಆದರೆ, ಈವರೆಗೂ ಆ ಕೆಲಸವನ್ನು ಮಾಡಿಲ್ಲ. ಮಾತೆತ್ತಿದರೆ ಬಿಜೆಪಿಗರು ಮೋದಿ ಎನ್ನುತ್ತಾರೆ. ಅಧಿಕಾರಕ್ಕೇರುವ ಮುನ್ನ ಎಲ್ಲರ ಬ್ಯಾಂಕ್ ಖಾತೆಗೆ 15 ಲಕ್ಷ ರೂ. ಹಾಕಲಾಗುವುದು ಎಂದರು. ಆದರೆ, ಅಧಿಕಾರಕ್ಕೇರಿದ ಮೋದಿ ಏನನ್ನೂ ಮಾಡಿಲ್ಲ. ನೋಟು ನಿಷೇಧದಿಂದ 21 ಸಾವಿರ ಕೋ.ರೂ. ಮರಳಿ ಬಂದಿದ್ದರೆ, ಹೊಸ ನೋಟುಗಳ ಮುದ್ರಣಕ್ಕೆ 29 ಸಾವಿರ ಕೋ.ರೂ. ವ್ಯಯಿಸಿತು. ಮೋದಿಯದ್ದು ಇದ್ಯಾವ ಆರ್ಥಿಕ ನೀತಿ ಎಂಬುದು ಗೊತ್ತಾಗುತ್ತಿಲ್ಲ. ಬಿಜೆಪಿಗರಿಗೆ ಮೋಸ ಮಾಡುವುದೇ ಉದ್ಯೋಗವಾಗಿದೆ ಎಂದು ರೈ ಹೇಳಿದರು.

ನೋಟು ಅಮಾನ್ಯದ ಬಳಿಕ ಬ್ಯಾಂಕ್‌ಗಳ ಮುಂದೆ ಸಾಲಿನಲ್ಲಿ ನಿಂತ 140ಕ್ಕೂ ಅಧಿಕ ಮಂದಿ ಮೃತಪಟ್ಟರು. ವಿದೇಶದಲ್ಲಿ ಹೀಗೆ ಆಗಿದ್ದರೆ ಅಲ್ಲಿನ ಜನರು ದಂಗೆ ಏಳುತ್ತಿದ್ದರು. ಆದರೆ, ಮೋದಿ ಜನರ ಬದುಕಿನೊಂದಿಗೆ ಚೆಲ್ಲಾಟವಾಡಿ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ ಎಂದು ರೈ ಆರೋಪಿಸಿದರು.

ವಿಧಾನ ಪರಿಷತ್ ಸದಸ್ಯರಾದ ಐವನ್ ಡಿಸೋಜ, ಹರೀಶ್ ಕುಮಾರ್, ಮಾಜಿ ಶಾಸಕರಾರ ಬಿ.ಎ.ಮೊಯ್ದಿನ್ ಬಾವ, ಜೆ.ಆರ್.ಲೋಬೊ, ಪಕ್ಷದ ಮುಖಂಡರಾದ ಕಳ್ಳಿಗೆ ತಾರನಾಥ ಶೆಟ್ಟಿ, ಬಲರಾಜ ರೈ, ಕೆ.ಕೆ.ಶಾಹುಲ್ ಹಮೀದ್, ಸದಾಶಿವ ಉಳ್ಳಾಲ್, ಕವಿತಾ ಸನಿಲ್, ಶಶಿಧರ ಹೆಗ್ಡೆ, ಅಪ್ಪಿ, ನವೀನ್ ಡಿಸೋಜ, ಮಮತಾ ಗಟ್ಟಿ, ಮುಹಮ್ಮದ್ ಮೋನು, ಎನ್.ಎಸ್.ಕರೀಂ, ಅಬೂಬಕರ್ ಕುದ್ರೋಳಿ ಮತ್ತಿತರರು ಪಾಲ್ಗೊಂಡಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News