ಪುತ್ತೂರಿನಲ್ಲಿ ಪ್ರಸೂತಿ ತಜ್ಞರ ಮುಷ್ಕರ ವೈದ್ಯ ವೃತ್ತಿಗೆ ಅಪಚಾರ: ಎಸ್‌ಡಿಪಿಐ

Update: 2018-11-09 10:22 GMT

ಪುತ್ತೂರು, ನ.9: ಪ್ರಜಾಪ್ರಭುತ್ವದಲ್ಲಿ ಪ್ರತಿಭಟನೆ ಎಂಬುವುದು ನಾಗರಿಕ ಹಕ್ಕು. ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಹೆರಿಗೆ ಸಂದರ್ಭ ಬಾಣಂತಿ ಸಾವಿಗೀಡಾದ ಪ್ರಕರಣದಲ್ಲಿ ನಡೆದ ಪ್ರತಿಭಟನೆಗೆ ವಿರುದ್ಧವಾಗಿ ಪುತ್ತೂರು ತಾಲೂಕಿನ ಪ್ರಸೂತಿ ತಜ್ಞರು ಶನಿವಾರ ಹಮ್ಮಿಕೊಂಡಿರುವ ಮುಷ್ಕರ ವೈದ್ಯ ವೃತ್ತಿಗೆ ಮಾಡುತ್ತಿರುವ ಅಪಚಾರವಾಗಿದೆ. ಇವರ ಪ್ರತಿಭಟನೆಯಿಂದ ರೋಗಿಗಳಿಗೆ ಅಪಾರ ತೊಂದರೆ ಉಂಟಾಗಲಿದೆ. ಪ್ರತಿಭಟನೆ ನಿರ್ಧಾರ ವೈದ್ಯರ ತಪ್ಪು ಹೆಜ್ಜೆ ಎಂದು ಎಸ್‌ಡಿಪಿಐ ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಅಭಿಪ್ರಾಯಿಸಿದ್ದಾರೆ.

ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಪುತ್ತೂರಿನ ಅದೊಂದೇ ಖಾಸಗಿ ಆಸ್ಪತ್ರೆಯಲ್ಲಿ ಇತ್ತೀಚೆಗೆ 13 ಅನಿರೀಕ್ಷಿತ ಸಾವುಗಳು ಸಂಭವಿಸಿವೆ. ಈ ಬಗ್ಗೆ ಹಲವು ಬಾರಿ ಸಂಘಟನೆಯ ಮುಖಂಡರು ಆ ಆಸ್ಪತ್ರೆಯ ವೈದ್ಯರೊಂದಿಗೆ ಮಾತುಕತೆ ನಡೆಸಿದ್ದು, ಇನ್ನು ಇಂತಹ ತಪ್ಪುಮರುಕಳಿಸದಂತೆ ಎಚ್ಚರ ವಹಿಸುವುದಾಗಿ ಭರವಸೆ ನೀಡಲಾಗಿತ್ತು. ಆದರೆ ಪದೇಪದೇ ಈ ರೀತಿಯ ಬೇಜವಾಬ್ದಾರಿತನ, ನಿರ್ಲಕ್ಷ್ಯದಿಂದ ಅಮಾಯಕರ ಜೀವ ಬಲಿಯಾಗುತ್ತಿರುವ ಹಿನ್ನೆಲೆಯಲ್ಲಿ ಜನತೆಯ ಹಿತದೃಷ್ಟಿಯಿಂದ ಪ್ರತಿಭಟನೆ ನಡೆಸಲಾಗಿದೆ. ಈ ಸಂದರ್ಭ ವೈದ್ಯರು ಆರೋಪಿಸಿದಂತೆ ಆಸ್ಪತ್ರೆಯ ಪ್ರವೇಶ ದ್ವಾರವನ್ನು ಬಂದ್ ಮಾಡಿಲ್ಲ. ಅಲ್ಲದೇ ಈ ಸಂದರ್ಭ ಯಾರಿಗೂ ಯಾವುದೇ ತೊಂದರೆ ಕೂಡಾ ಆಗಿಲ್ಲ. ವೈದ್ಯ ವೃತ್ತಿ ಬಗ್ಗೆ ನಮಗೂ ಗೌರವವಿದೆ. ಪೊಲೀಸರ ಉಪಸ್ಥಿತಿಯಲ್ಲೇ ಈ ಪ್ರತಿಭಟನೆ ನಡೆಸಲಾಗಿದೆ. ಒಂದುವೇಳೆ ಪ್ರತಿಭಟನೆಯ ವೇಳೆ ನಮ್ಮಿಂದ ತಪ್ಪುಗಳಾಗಿದ್ದರೆ ನಮ್ಮ ಮೇಲೆ ಕಾನೂನು ಕ್ರಮ ತೆಗೆದುಕೊಳ್ಳಲಿ. ಅದುಬಿಟ್ಟು ರೋಗಿಗಳಿಗೆ ತೊಂದರೆಯುಂಟು ಮಾಡುವ ಮುಷ್ಕರಕ್ಕೆ ಮುಂದಾಗಿರುವುದು ಸರಿಯಲ್ಲ ಎಂದರು.

ಪ್ರತಿಟನೆ ನಡೆಸಿರುವುದು ಯಾವುದೇ ಒಂದು ಸಮುದಾಯಕ್ಕೆ ಅನ್ಯಾಯವಾಗಿದೆ ಎಂದಲ್ಲ. ಇಲ್ಲಿ ಜಾತಿ, ಧರ್ಮದ ಪ್ರಶ್ನೆಯೇ ಇಲ್ಲ. ಹಲವು ಬಾರಿ ಎಚ್ಚರಿಕೆ ನೀಡಿದ ನಂತರವೂ ನಿರ್ದಿಷ್ಟ ಆಸ್ಪತ್ರೆಯಲ್ಲಿ ಇಂತಹ ಅನಿರೀಕ್ಷಿತ ಸಾವುಗಳು ಸಂಭವಿಸುವುದು ನಿಲ್ಲುತ್ತಿಲ್ಲ ಎಂಬ ಕಾರಣಕ್ಕೆ ಪ್ರತಿಭಟನೆ ನಡೆಸಲಾಗಿದೆ. ಇದಕ್ಕೆ ವೈದ್ಯರು ಕೋಮು ಬಣ್ಣ ಹಚ್ಚುವುದಕ್ಕೆ ಮುಂದಾಗಿರುವುದು ತಪ್ಪು ಎಂದು ಸಿದ್ದೀಕ್ ಹೇಳಿದರು.

ಪ್ರಸೂತಿ ತಜ್ಞರು ಶನಿವಾರ ತಮ್ಮ ಪ್ರತಿಭಟನೆ ನಡೆಸಿದರೆ ಆ ಸಂದರ್ಭದಲ್ಲಿ ರೋಗಿಗಳ ಅನುಕೂಲಕ್ಕಾಗಿ ಆ್ಯಂಬುಲೆನ್ಸ್ ಸಹಕಾರವನ್ನು ಎಸ್.ಡಿ.ಪಿ.ಐ. ವತಿಯಿಂದ ಮಾಡಲಾಗುತ್ತದೆ. ಅಲ್ಲದೆ ಪುತ್ತೂರು ಸರಕಾರಿ ಆಸ್ಪತ್ರೆಯ ಪ್ರಸೂತಿ ತಜ್ಞರ ಜತೆ ಮಾತುಕತೆ ನಡೆಸಿ ಈ ಸಂದರ್ಭದಲ್ಲಿ ರೋಗಿಗಳಿಗೆ ಸೂಕ್ತ ನೆರವು ನೀಡುವಂತೆ ಇತರ ತಾಲೂಕುಗಳ ಸರ್ಕಾರಿ ಆಸ್ಪತ್ರೆಯ ಪ್ರಸೂತಿ ವೈದ್ಯರುಗಳಿಗೆ ಮನವಿ ಮಾಡಲಾಗಿದೆ ಎಂದರು.

ಸುದ್ದಿಗೋಷ್ಠಿಯಲ್ಲಿ ಎಸ್.ಡಿ.ಪಿ.ಐ. ಜಿಲ್ಲಾ ಸಮಿತಿಯ ಸದಸ್ಯ ಜಾಬೀರ್ ಅರಿಯಡ್ಕ, ಪುತ್ತೂರು ಸಮಿತಿಯ ಉಪಾಧ್ಯಕ್ಷ ಇಬ್ರಾಹೀಂ ಹಾಜಿ ಸಾಗರ್, ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಮೀದ್ ಹಾಜಿ ಮೆಜೆಸ್ಟಿಕ್, ಜೊತೆ ಕಾರ್ಯದರ್ಶಿ ಅಶ್ರಫ್ ಬಾವಾ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News