ಅರುಣಾಚಲ: ಭಾರತ ಮತ್ತು ಚೀನಾದ ಸೇನಾಧಿಕಾರಿಗಳ ಸಭೆ, ಸಂಬಂಧ ವೃದ್ಧಿಗೆ ಪಣ

Update: 2018-11-09 14:26 GMT

ಇಟಾನಗರ,ನ.9: ಅರುಣಾಚಲ ಪ್ರದೇಶದ ತವಾಂಗ್ ಜಿಲ್ಲೆಗೆ ಸಮೀಪದ ಬುಮ್ಲಾದಲ್ಲಿ ಶುಕ್ರವಾರ ಭಾರತ ಮತ್ತು ಚೀನಾದ ಸೇನೆಗಳ ನಡುವೆ ಉನ್ನತ ಮಟ್ಟದ ಸಭೆಯೊಂದನ್ನು ಆಯೋಜಿಸಲಾಗಿತ್ತು. ತಮ್ಮ ನಡುವಿನ ಸ್ನೇಹವನ್ನು ಇನ್ನಷ್ಟು ಸದೃಢಗೊಳಿಸುವ ಮತ್ತು ವಾಸ್ತವ ನಿಯಂತ್ರಣ ರೇಖೆಯಲ್ಲಿ ಶಾಂತಿಯನ್ನು ಕಾಯ್ದುಕೊಳ್ಳುವ ತಮ್ಮ ನಿರ್ಣಯವನ್ನು ಉಭಯ ರಾಷ್ಟ್ರಗಳು ಸಭೆಯಲ್ಲಿ ಪುನರ್ ದೃಢೀಕರಿಸಿದವು.

ಮೇ.ಜ.ಪಿಜಿಕೆ ಮೆನನ್ ಮತ್ತು ಮೇ.ಜ.ಲಿ ಕ್ಸಿ ಝಾಂಗ್ ನೇತೃತ್ವದ ನಿಯೋಗಗಳು ಉಭಯ ರಾಷ್ಟ್ರಗಳ ಧ್ವಜಾರೋಹಣವನ್ನು ನಡೆಸಿದ ಬಳಿಕ ತಮ್ಮ ನಡುವಿನ ಸಂಬಂಧಗಳನ್ನು ಹೆಚ್ಚಿಸಲು ಮಾರ್ಗೋಪಾಯಗಳ ಕುರಿತು ಚರ್ಚಿಸಿದವು ಎಂದು ರಕ್ಷಣಾ ಸಚಿವಾಲಯವು ಹೇಳಿಕೆಯಲ್ಲಿ ತಿಳಿಸಿದೆ.

1990ರಲ್ಲಿ ಗಡಿ ಸಿಬ್ಬಂದಿಗಳ ಸಭೆ(ಬಿಪಿಎಂ) ಪ್ರಕ್ರಿಯೆ ಆರಂಭಗೊಂಡ ಬಳಿಕ ಉಭಯ ರಾಷ್ಟ್ರಗಳ ಮೇಜರ್ ಜನರಲ್‌ಗಳು ಸಭೆಯಲ್ಲಿ ಪಾಲ್ಗೊಂಡಿದ್ದು ಇದೇ ಮೊದಲ ಬಾರಿಯಾಗಿದೆ.

ಬುಧವಾರ ದೀಪಾವಳಿ ಸಂದರ್ಭದಲ್ಲಿ ಉಭಯ ರಾಷ್ಟ್ರಗಳ ಸೇನಾ ಸಿಬ್ಬಂದಿಗಳು ಪರಸ್ಪರ ಶುಭಾಶಯಗಳು ಮತ್ತು ಕಾಣಿಕೆಗಳನ್ನು ವಿನಿಮಯಿಸಿಕೊಂಡಿದ್ದರು.

ರಾಜತಾಂತ್ರಿಕ ಮತ್ತು ಸೇನಾ ಮಾರ್ಗಗಳ ಮೂಲಕ ಎಲ್ಲ ಮಟ್ಟಗಳಲ್ಲಿ ಪರಸ್ಪರ ಸಂವಾದಗಳನ್ನು ಹೆಚ್ಚಿಸಲು ಉಭಯ ರಾಷ್ಟ್ರಗಳು ನಡೆಸುತ್ತಿರುವ ಪ್ರಯತ್ನಗಳಲ್ಲಿ ಬುಮ್ಲಾ ಸಭೆ ಇನ್ನೊಂದು ಮೈಲುಗಲ್ಲಾಗಿದೆ ಎಂದು ಹೇಳಿಕೆಯು ತಿಳಿಸಿದೆ.

ತವಾಂಗ್ ಪಟ್ಟಣದಿಂದ 42 ಕಿ.ಮೀ.ದೂರದಲ್ಲಿ,15,000 ಅಡಿಗಳ ಎತ್ತರದಲ್ಲಿರುವ ಬುಮ್ಲಾ ಬಿಪಿಎಂಗಳನ್ನು ನಡೆಸಲು ನಿಯೋಜಿತ ಐದು ತಾಣಗಳಲ್ಲೊಂದಾಗಿದೆ.

ಉಭಯ ರಾಷ್ಟ್ರಗಳ ನಡುವೆ ಹೆಚ್ಚುತ್ತಿರುವ ಪರಸ್ಪರ ನಂಬಿಕೆ ಮತ್ತು ಸೌಹಾರ್ದದ ಬಗ್ಗೆ ಎರಡೂ ನಿಯೋಗಗಳು ತೃಪ್ತಿಯನ್ನು ವ್ಯಕ್ತಪಡಿಸಿವೆ ಮತ್ತು ಭಾರತ-ಚೀನಾ ಸಂಬಂಧವು ಭವಿಷ್ಯದಲ್ಲಿ ಇನ್ನಷ್ಟು ಗಟ್ಟಿಯಾಗಲಿದೆ ಎಂಬ ಆಶಯವನ್ನು ವ್ಯಕ್ತಪಡಿಸಿವೆ ಎಂದೂ ಹೇಳಿಕೆಯು ತಿಳಿಸಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News