ಲೈಂಗಿಕ ಕಿರುಕುಳ ನಿಭಾಯಿಸುತ್ತಿದ್ದ ರೀತಿಗೆ ಕ್ಷಮೆ ಕೋರಿದ ಗೂಗಲ್
Update: 2018-11-09 20:18 IST
ಸಾನ್‌ಫ್ರಾನ್ಸಿಸ್ಕೊ, ನ. 9: ಹಿಂದೆ ಲೈಂಗಿಕ ಕಿರುಕುಳ ಪ್ರಕರಣಗಳನ್ನು ನಿಭಾಯಿಸುತ್ತಿದ್ದ ರೀತಿಗಾಗಿ ತಂತ್ರಜ್ಞಾನ ದೈತ್ಯ ಗೂಗಲ್ ಕ್ಷಮೆ ಕೋರಿದೆ ಹಾಗೂ ಕಂಪೆನಿಯನ್ನು ಸುರಕ್ಷಿತ ಕೆಲಸದ ಸ್ಥಳವನ್ನಾಗಿ ಮಾಡಲು ಬದಲಾವಣೆಗಳನ್ನು ತರುವ ಭರವಸೆಯನ್ನು ನೀಡಿದೆ.
ಗೂಗಲ್ ಕಚೇರಿಗಳಲ್ಲಿ ಅನುಭವಿಸುತ್ತಿರುವ ಲೈಂಗಿಕ ಕಿರುಕುಳ ಹಾಗೂ ಹಿರಿಯ ಅಧಿಕಾರಿಗಳ ವಿರುದ್ಧದ ಲೈಂಗಿಕ ಕಿರುಕುಳ ಆರೋಪಗಳ ಬಗ್ಗೆ ಕಂಪೆನಿಯ ನಿರ್ಲಕ್ಷವನ್ನು ಪ್ರತಿಭಟಿಸಿ ಕಳೆದ ವಾರ ಜಗತ್ತಿನಾದ್ಯಂತದ ಗೂಗಲ್ ಕಚೇರಿಗಳಿಂದ 20,000ಕ್ಕೂ ಅಧಿಕ ಉದ್ಯೋಗಿಗಳು ಹೊರನಡೆದ ಬಳಿಕ ಈ ಬೆಳವಣಿಗೆ ಸಂಭವಿಸಿದೆ.
‘‘ಹಿಂದೆ ನಾವು ಎಲ್ಲವನ್ನೂ ಸರಿಯಾದ ರೀತಿಯಲ್ಲಿ ನಿಭಾಯಿಸಿಲ್ಲ ಎನ್ನುವುದನ್ನು ಒಪ್ಪಿಕೊಳ್ಳುತ್ತೇವೆ ಹಾಗೂ ನಾವು ಅದಕ್ಕೆ ಪ್ರಾಮಾಣಿಕವಾಗಿ ಕ್ಷಮೆ ಕೋರುತ್ತೇವೆ’’ ಎಂದು ಗುರುವಾರ ಉದ್ಯೋಗಿಗಳಿಗೆ ಬರೆದ ಪತ್ರವೊಂದರಲ್ಲಿ ಗೂಗಲ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುಂದರ ಪಿಚೈ ಹೇಳಿದ್ದಾರೆ.