ಟ್ರಂಪ್ ರನ್ನು ಎಂದೂ ಕ್ಷಮಿಸಲಾರೆ ಎಂದ ಒಬಾಮಾ ಪತ್ನಿ
ವಾಶಿಂಗ್ಟನ್, ನ. 9: ತನ್ನ ಗಂಡ ಬರಾಕ್ ಒಬಾಮ ವಿರುದ್ಧ ‘ಬರ್ತರ್’ ಪಿತೂರಿ ಸಿದ್ಧಾಂತವನ್ನು ಹರಡಿದ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ವಿರುದ್ಧ ಅಮೆರಿಕದ ಮಾಜಿ ಪ್ರಥಮ ಮಹಿಳೆ ಮಿಶೆಲ್ ಒಬಾಮಾ ಹರಿಹಾಯ್ದಿದ್ದಾರೆ.
ಬರಾಕ್ ಒಬಾಮ ಅಮೆರಿಕದಲ್ಲಿ ಹುಟ್ಟಿದವರಲ್ಲ, ಹಾಗಾಗಿ, ಅವರು ಕಾನೂನು ಉಲ್ಲಂಘಿಸಿ ಅಮೆರಿಕದ ಅಧ್ಯಕ್ಷರಾಗಿದ್ದಾರೆ ಎಂಬುದಾಗಿ ವಾದಿಸುವವರನ್ನು ‘ಬರ್ತರ್’ ಎಂದು ಕರೆಯಲಾಗುತ್ತದೆ.
‘‘ನನ್ನ ಗಂಡ ಅಮೆರಿಕದಲ್ಲಿ ಹುಟ್ಟಿಯೇ ಇಲ್ಲ ಎಂಬುದಾಗಿ ಜನಾಂಗೀಯ ದೌರ್ಜನ್ಯದ ಹೇಳಿಕೆ ನೀಡಿದ ಟ್ರಂಪ್ ರನ್ನು ನಾನು ಯಾವತ್ತೂ ಕ್ಷಮಿಸಲಾರೆ’’ ಎಂದು ತನ್ನ ಜೀವನಚರಿತ್ರೆ ‘ಬಿಕಮಿಂಗ್’ನಲ್ಲಿ ಮಿಶೆಲ್ ಹೇಳಿದ್ದಾರೆ ಎಂದು ‘ದ ಹಿಲ್’ ಮ್ಯಾಗಝಿನ್ ವರದಿ ಮಾಡಿದೆ.
‘‘ಇದು ಹುಚ್ಚು ಮತ್ತು ಕ್ಷುಲ್ಲಕ ಮನಸ್ಸಿನ ಪ್ರದರ್ಶನವಾಗಿದೆ. ಇದರ ಹಿಂದಿರುವ ಅಸಹಿಷ್ಣುತೆ ಮತ್ತು ಜನಾಂಗೀಯ ದ್ವೇಷವನ್ನು ಮರೆಮಾಚಲು ಸಾಧ್ಯವಿಲ್ಲ’’ ಎಂದು ಮಾಜಿ ಪ್ರಥಮ ಮಹಿಳೆ ಬರೆದಿದ್ದಾರೆ.
‘‘ಅದು ಅತ್ಯಂತ ಅಪಾಯಕಾರಿ ಹೇಳಿಕೆಯಾಗಿತ್ತು. ಒಬ್ಬ ವ್ಯಕ್ತಿಯ ಬಗ್ಗೆ ದ್ವೇಷ ಹುಟ್ಟಿಸುವ ಉದ್ದೇಶವನ್ನು ಅದು ಹೊಂದಿತ್ತು’’ ಎಂದು ಮಿಶೆಲ್ ತನ್ನ ಜೀವನ ಚರಿತ್ರೆಯಲ್ಲಿ ಬರೆದಿದ್ದಾರೆ.