ಶಿರಾಡಿ:ಪ್ರಪಾತಕ್ಕೆ ಉರುಳಿ ಬಿದ್ದ ಕಾರು; ಚಾಲಕ ಮೃತ್ಯು

Update: 2018-11-11 16:24 GMT

ಉಪ್ಪಿನಂಗಡಿ, ನ. 11: ಕಾರೊಂದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಚಾಲಕ ಮೃತಪಟ್ಟ ಘಟನೆ ಗುಂಡ್ಯ ಹಾಗೂ ಶಿರಾಡಿ ಗಡಿ ದೇವಾಲಯದ ಮಧ್ಯದ ಬರ್ಚಿನಹಳ್ಳ ಸಮೀಪ ಹೆದ್ದಾರಿ ಕುಸಿತದ ಜಾಗದಲ್ಲಿ ರವಿವಾರ ಬೆಳಕಿಗೆ ಬಂದಿದೆ.

ತಮಿಳುನಾಡಿನ ಹೊಸೂರು ತಾಲೂಕಿನ ಮುತ್ತಪ್ಪ ಎಂಬವರ ಪುತ್ರ ವೆಂಕಟರಾಜು ಮೃತ ವ್ಯಕ್ತಿ ಎಂದು ಗುರುತಿಸಲಾಗಿದೆ.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಯಾತ್ರಾರ್ಥಿಯಾಗಿ ಬಂದಿದ್ದ ಅವರು ಶನಿವಾರ ಪೂಜೆ ಮುಗಿಸಿ ಕಾರಿನಲ್ಲಿ ವಾಪಸ್ ಊರಿಗೆ ತೆರಳುತ್ತಿದ್ದ ಸಂದರ್ಭ ಬರ್ಚಿನಹಳ್ಳ ಸಮೀಪ ಈ ಅಪಘಾತ ಸಂಭವಿಸಿದೆ.

ಇಲ್ಲಿ ಹೆದ್ದಾರಿಯು ಈ ಬಾರಿ ಹೊಸದಾಗಿ ಕಾಂಕ್ರಿಟೀಕರಣಗೊಂಡಿದ್ದು, ಆದರೂ ಕಳೆದ ಮಳೆಗಾಲದಲ್ಲಿ ರಸ್ತೆಯ ಅರ್ಧ ಕುಸಿದಿದ್ದು, ಕುಸಿದಿರುವ ಭಾಗಕ್ಕೆ ಹೆದ್ದಾರಿಯಲ್ಲಿ ಅಡ್ಡಲಾಗಿ ಇಟ್ಟಿಗೆಗಳನ್ನಿಟ್ಟು ತಡೆಗೋಡೆ ನಿರ್ಮಿಸಿ ಇಲ್ಲಿ ವಾಹನ ಚಾಲಕರಿಗೆ ಏಕಮುಖವಾಗಿ ಸಂಚರಿಸಲು ಅನುವು ಮಾಡಿಕೊಡಲಾಗಿತ್ತು. ಆದರೆ ಇವರ ಕಾರು ಈ ತಡೆಗೋಡೆಗೆ ಢಿಕ್ಕಿ ಹೊಡೆದು ಸುಮಾರು 80 ಅಡಿ ಆಳದ ಪ್ರಪಾತಕ್ಕೆ ಉರುಳಿ ಬಿದ್ದಿದೆ. ಕಾರಿನಲ್ಲಿ ಒಬ್ಬರೇ ಇದ್ದು, ಅವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

ಉಪ್ಪಿನಂಗಡಿ ಹಾಗೂ ನೆಲ್ಯಾಡಿ ಪೊಲೀಸರು ಸ್ಥಳಕ್ಕೆ ಧಾವಿಸಿ, ಮೃತದೇಹವನ್ನು ಮೇಲಕ್ಕೆತ್ತಿ ದೇರಳಕಟ್ಟೆ ಆಸ್ಪತ್ರೆಗೆ ರವಾನಿಸಿದ್ದಾರೆ. ಈ ಬಗ್ಗೆ ಗುಂಡ್ಯ ನಿವಾಸಿ ಸುಭಾಷ್ ಎಂಬವರು ನೀಡಿದ ದೂರಿನಂತೆ ಉಪ್ಪಿನಂಗಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News