ಪುತ್ತೂರು: ಪ್ರಸೂತಿ ತಜ್ಞರ ಮುಷ್ಕರದ ನಡುವೆ ಪುತ್ತೂರಿನ ಜನತೆಗೆ ಸಂಜೀವಿನಿಯಾದ ಕಣಚೂರು ಆಸ್ಪತ್ರೆ

Update: 2018-11-11 16:47 GMT

ಪುತ್ತೂರು, ನ. 11: ಖಾಸಗಿ ಆಸ್ಪತ್ರೆಗಳ ಪ್ರಸೂತಿ ತಜ್ಞರ ಮುಷ್ಕರದಿಂದ ಪುತ್ತೂರಿನ ಜನರಿಗೆ ತೊಂದರೆಯಾಗದಂತೆ ಕಣಚೂರು ಆಸ್ಪತ್ರೆಯಿಂದ ವೈದ್ಯರ ತಂಡವು ಆಗಮಿಸಿ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಕಣಚೂರು ಆಸ್ಪತ್ರೆಯ ಅಧ್ಯಕ್ಷರಿಗೆ ಹಾಗೂ ಸಿಬ್ಬಂದಿಗಳಿಗೆ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

ಪುತ್ತೂರಿನ ಖಾಸಗಿ ಆಸ್ಪತ್ರೆಯ ಪ್ರಸೂತಿ ತಜ್ಞರು ನ.10ರಂದು ಬೆಳಿಗ್ಗೆ 5 ಗಂಟೆಯಿಂದ ನ.11ರ ಬೆಳಿಗ್ಗೆ 5 ಗಂಟೆಯ ತನಕ ಕರ್ತವ್ಯ ನಿರ್ವಹಿಸದೆ ಮುಷ್ಕರ ಕೈಗೊಂಡಿದ್ದು, ಈ ಸಮಯದಲ್ಲಿ ಪುತ್ತೂರಿನ ಜನತೆಗೆ ತೊಂದರೆಯಾಗಬಾರದು ಎಂಬ ಸದುದ್ದೇಶದಲ್ಲಿ ಕಣಚೂರು ವೈದ್ಯಕೀಯ ಕಾಲೇಜ್‍ನ ಅಧ್ಯಕ್ಷ ಕಣಚೂರು ಮೋನು ಹಾಜಿ ಅವರನ್ನು ಪುತ್ತೂರಿನ ನ್ಯಾಯವಾದಿ ಹಾಗೂ ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಲ್ಪ ಸಂಖ್ಯಾತರ ಸಮಿತಿಯ ಸಂಯೋಜಕರಾದ ನೂರುದ್ದಿನ್ ಸಾಲ್ಮರ ಅವರ ನೇತೃತ್ವದಲ್ಲಿ ನಿಯೋಗವೊಂದು ಭೇಟಿಯಾಗಿ ಮನವಿ ಸಲ್ಲಿಸಿದ ಮೇರೆಗೆ ದ.ಕ.ಜಿಲ್ಲಾ ಆರೋಗ್ಯಾಧಿಕಾರಿ ಡಾ. ರಾಮಕೃಷ್ಣ ರಾವ್ ಅವರ ಕೋರಿಕೆಯಂತೆ ಕಣಚೂರು ವೈದ್ಯಕೀಯ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಅಕ್ಷತಾ ಅವರ ನೇತೃತ್ವದ ತಂಡ ಪುತ್ತೂರು ಸರ್ಕಾರಿ ಆಸ್ಪತ್ರೆಯಲ್ಲಿ ಸೇವೆ ಸಲ್ಲಿಸಿತ್ತು. ಈ ವೈದ್ಯರ ತಂಡವು 3 ಹೆರಿಗೆಯನ್ನು ಆಸ್ಪತ್ರೆಯಲ್ಲಿ ನಡೆಸಿದೆ. ಅಲ್ಲದೆ ಸುಮಾರು 25 ಗರ್ಭಿಣಿಯರ ತಪಾಸಣೆ ನಡೆಸಿತ್ತು.

ಕಷ್ಟ ಕಾಲದಲ್ಲಿ ಪುತ್ತೂರಿನ ಜನತೆಗೆ ಮಾನವೀಯ ಸೇವೆ ನೀಡಿದ ಕಣಚೂರು ಆಸ್ಪತ್ರೆ ಹಾಗೂ ಅದರ ಸಿಬ್ಬಂದಿ ವರ್ಗದವರಿಗೆ ಆಸ್ಪತ್ರೆಯ ಅಧ್ಯಕ್ಷ  ಹಾಜಿ ಯು.ಕೆ. ಮೋನು ಅವರಿಗೆ, ಅವರ ಪುತ್ರ ಕಣಚೂರು ರಹ್ಮಾನ್ ಅವರಿಗೆ, ಪುತ್ತೂರಿನ ವೈದ್ಯಾಧಿಕಾರಿ ಡಾ. ವೀಣಾ ಅವರಿಗೆ, ಆಸ್ಪತ್ರೆಯ ಸಿಬ್ಬಂದಿಗಳಿಗೆ, ಸ್ವಯಂ ಸೇವಕರಾಗಿ ದುಡಿದ ಉಸ್ಮಾನ್ ಕೆರೆಮೂಲೆ ಹಾಗೂ ರಶೀದ್ ಅವರಿಗೆ ಧನ್ಯವಾದಗಳು ಎಂಬ ಸಂದೇಶ ವಾಟ್ಸಪ್‍ಗಳಲ್ಲಿ ಎಲ್ಲೆಡೆ ಹರಿದಾಡಿದೆ. 

ಕಣಚೂರು ಆಸ್ಪತ್ರೆಯ 2 ಪ್ರಸೂತಿ ತಜ್ಞರು, ಓರ್ವ ಅರಿವಳಿಕೆ ತಜ್ಞರು ಹಾಗೂ ಓರ್ವ ಸಿಬ್ಬಂದಿ ಪುತ್ತೂರು ಸರ್ಕಾರಿ ಆಸ್ಪತ್ರೆಗೆ ಆಗಮಿಸಿ ಸೇವೆ ಸಲ್ಲಿಸಿದ್ದರು. ಶನಿವಾರ ಬೆಳಗ್ಗೆ ಕಣಚೂರು ಆಸ್ಪತ್ರೆಯಿಂದ ಆಗಮಿಸಿದ ವೈದ್ಯರ ತಂಡವು ರವಿವಾರ  ಹಿಂದಿರುಗಿತು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News