ಚೈನ್ ಲಿಂಕ್ ಕಂಪೆನಿ ವಿರುದ್ಧ ಸಿಐಡಿ ಅಧಿಕಾರಿಗಳಿಂದ ಚಾರ್ಚ್‍ಶೀಟ್ ಸಲ್ಲಿಕೆ

Update: 2018-11-11 16:52 GMT

ಪುತ್ತೂರು, ನ. 11: ಸಾರ್ವಜನಿಕರಿಗೆ ಮೋಸ ಮತ್ತು ವಂಚನೆ ಮಾಡಿ ಸಾರ್ವಜನಿಕ ಹಣವನ್ನು ದುರುಪಯೋಗಪಡಿಸಿಕೊಂಡಿರುವ ಬಗ್ಗೆ ಪುತ್ತೂರು,  ಎಪಿಎಂಸಿ. ರಸ್ತೆಯಲ್ಲಿರುವ ಖಾಸಗಿ ಕಟ್ಟಡದಲ್ಲಿ ಕಾರ್ಯಚರಿಸುತ್ತಿದ್ದ ಹಿಂದೂಸ್ಥಾನ್ ಇನ್ಪ್ರಕಾನ್ ಇಂಡಿಯಾ ಲಿಮಿಟೆಡ್ ಎಂಬ ಚೈನ್ ಲಿಂಕ್ ಕಂಪನಿಯ ವಿರುದ್ಧ 2016 ರಲ್ಲಿ ದಾಖಲಾಗಿದ್ದ ಖಾಸಗಿ ದೂರಿಗೆ ಸಂಬಂಧಿಸಿದಂತೆ ಸಿ.ಐ.ಡಿ ಅಧಿಕಾರಿಗಳಿಂದ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಕೆಯಾಗಿದೆ.

ಪ್ರಕರಣದ ಹಿನ್ನೆಲೆ: 

ವಿ.ಎನ್.ಲಕ್ಷ್ಮೀನಾರಾಯಣ ಮತ್ತು ಎಸ್. ಸುರೇಶ್ ಎಂಬವರು ಹಿಂದೂಸ್ಥಾನ್‍ ಇನ್ಪ್ರಕಾನ್ (ಇಂಡಿಯಾ) ನಿಯಮಿತ ಎಂಬ ಸಂಸ್ಥೆಯನ್ನು ಸ್ಥಾಪಿಸಿ ಸಾರ್ವಜನಿಕ ರಿಂದ ಚೈನ್ ಲಿಂಕ್ ಮೂಲಕ ಹಣವನ್ನು ಸಂಗ್ರಹಿಸುತ್ತಿದ್ದರು. ಪುತ್ತೂರು ಮತ್ತು ಬೆಳ್ತಂಗಡಿ ತಾಲೂಕನ್ನು ಕೇಂದ್ರಿಕರಿಸಿ ಈ ಸಂಸ್ಥೆ ಕಾರ್ಯಾ ಚರಿಸಿದ್ದು, ಸಂಸ್ಥೆಯ ಜಾಹೀರಾತು ಮೂಲಕ ಕಂಪೆನಿಯ ರಾಜ್ಯ ಹಾಗೂ ರಾಷ್ಟ್ರೀಯ ವಾಹಿ ಕಾನೂನಿನ ಪ್ರಕಾರ ವಾಹಿಯೇ ಕೆಲಸವನ್ನು ಮಾಡುತ್ತಿದೆ ಮತ್ತು ಈ ಹಣಕಾಸು ಸಂಸ್ಥೆಯು ಆರ್‍ಬಿಐ ಹಾಗೂ ಐಆರ್‍ಡಿಎ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ನಂಬಿಸಿ, ಹಲವು ಯುವಕರನ್ನು ತನ್ನತ್ತ ಸೆಳೆದು ಅವರನ್ನು ಸಂಸ್ಥೆಯ ಏಜೆಂಟ್‍ಗಳನ್ನಾಗಿ ಮಾಡಿ ಸಾರ್ವಜನಿಕರಿಂದ ಹಣವನ್ನು ಸಂಗ್ರಹಿಸಿದ್ದರು. ಈ ಹಣವನ್ನು ಹಿಂತಿರುಗಿ ಕೇಳಿದ ಸಂದರ್ಭದಲ್ಲಿ ಹಣವನ್ನು ಹಿಂತಿರುಗಿಸದೆ ಲಕ್ಷಾಂತರ ರೂಪಾಯಿ ಮೋಸ ಮತ್ತು ವಂಚಿಸಿ ಜೀವ ಬೆದರಿಕೆ ಒಡ್ಡಿರುತ್ತಾರೆ ಎಂಬುದಾಗಿ ಆರೋಪಿಸಿ ಬೆಳ್ತಂಗಡಿ ತಾಲೂಕಿನ ಕನ್ಯಾಡಿ ಗ್ರಾಮದ ಪ್ರಶಾಂತ್ ಶೆಟ್ಟಿ  ಮತ್ತು ಬೆಳ್ತಂಗಡಿ ತಾಲೂಕಿನ ಮೇಲಂತಬೆಟ್ಟು ಗ್ರಾಮದ ಗಣೇಶ ಎಂಬವರು ಪ್ರತ್ಯೇಕ ಖಾಸಗಿ ದೂರುಗಳನ್ನು ನ್ಯಾಯವಾದಿ ಶ್ಯಾಮ್ ಪ್ರಸಾದ್ ಕೈಲಾರ್ ಮೂಲಕ ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ವಿಚಾರಣೆ ನಡೆಸಿದ ನ್ಯಾಯಾಲಯ ತನಿಖೆ ನಡೆಸಿ ವರದಿ ನೀಡುವಂತೆ ಪುತ್ತೂರು ನಗರ ಪೊಲೀಸರಿಗೆ ಆದೇಶಿಸಿತ್ತು. ಸಂಸ್ಥೆಯು ರಾಜ್ಯಾದ್ಯಂತ ಸಾರ್ವಜನಿಕರಿಗೆ ಮೋಸ ಮತ್ತು ವಂಚನೆ ನಡೆಸಿರುವುದನ್ನು ಮನಗಂಡ ರಾಜ್ಯ ಸರಕಾರ ಪ್ರಕರಣದ ತನಿಖೆಯನ್ನು ಸಿ.ಐ.ಡಿ ಅಧಿಕಾರಿಗಳಿಗೆ ಹಸ್ತಾಂತರಿ ಸಿತ್ತು. ಇದೀಗ ತನಿಖೆ ನಡೆಸಿ ಹೆಚ್ಚುವರಿಯಾಗಿ `ಕರ್ನಾಟಕ ಹಣಕಾಸು ಸಂಸ್ಥೆಗಳಲ್ಲಿ ಠೇವಣಿದಾರ ಹಿತಾಸಾಕ್ತಿ ರಕ್ಷಣೆ ಕಾಯ್ದೆ' ಅಡಿಯಲ್ಲಿ ಆರೋಪಿಗಳು ಮತ್ತು ಸಂಸ್ಥೆಯ ವಿರುದ್ಧ ಮಾನ್ಯ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯಕ್ಕೆ ಚಾರ್ಜ್ ಶೀಟ್ ಸಲ್ಲಿಸಿರುತ್ತಾರೆ.

ದೂರುದಾರರ ಪರವಾಗಿ ಪರಚಾಣಕ್ಯ ಲಾ ಚೇಂಬರ್ಸ್‍ನ ನ್ಯಾಯವಾದಿ ಶ್ಯಾಮ್‍ಪ್ರಸಾದ್ ಕೈಲಾರ್ ವಾದಿಸಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News