ಇರಾನ್ ನಲ್ಲಿ ಗೃಹಬಂಧನಕ್ಕೊಳಗಾದ ಉ.ಕ. ಜಿಲ್ಲೆಯ ಮೀನುಗಾರರ ಬದುಕು ಅತಂತ್ರ: ಕೇಂದ್ರ ಸರಕಾರ ಗಮನ ಹರಿಸಲು ಒತ್ತಾಯ

Update: 2018-11-12 08:08 GMT

ಭಟ್ಕಳ, ನ. 12: ಕಳೆದ ನಾಲ್ಕು ತಿಂಗಳಿಂದ ಅಕ್ರಮ ಗಡಿ ಪ್ರವೇಶದ ಆರೋಪದಡಿ ಇರಾನ್ ದೇಶದ ನೌಕಪಡೆಯಿಂದ ಗೃಹಬಂಧನಕ್ಕೊಳಗಾಗಿದ್ದ ಉತ್ತರಕನ್ನಡ ಜಿಲ್ಲೆಯ ಭಟ್ಕಳ, ಮುರುಡೇಶ್ವರ, ಕುಮಟಾದ ಸುಮಾರು 18 ಮೀನುಗಾರರನ್ನು ಬಿಡುಗಡೆಗೊಳಿಸಲು ವಿದೇಶಾಂಗ ವ್ಯವಹಾರಗಳ ಸಚಿವಾಲಯ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿ ಗೃಹಬಂಧನಕ್ಕೊಳಗಾದವರು ಮತ್ತೆ ವೀಡಿಯೊ ಮೂಲಕ ಮನವಿ ಮಾಡಿ, ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ರಿಗೆ ಮನವಿ ಮಾಡಿದ್ದಾರೆ.

ದುಬೈಯಲ್ಲಿ ಮೀನುಗಾರಿಕೆಯೇ ಅವರ ಪ್ರಮುಖ ಕಸುಬಾಗಿದ್ದು ಅಲ್ಲಿಯ ನಿವಾಸಿಗಳ ಪ್ರಯೋಜಕತ್ವದಲ್ಲಿ ತಿಂಗಳುಗಟ್ಟಲೆ ಅರಬ್ಬಿ ಸಮುದ್ರದಲ್ಲಿ ಮೀನುಗಾರಿಕೆ ಮಾಡುತ್ತಿದ್ದಾರೆ. ಆದರೆ 4 ತಿಂಗಳ ಹಿಂದೆ ಮೀನುಗಾರಿಕೆಗೆ ತೆರಳಿದ್ದ ತಂಡವನ್ನು ಅರಬ್ಬಿ ಸಮುದ್ರದ ದುಬೈ ಗಡಿಯಲ್ಲಿ ಇರಾನಿ ನೌಕಪಡೆ ಅಧಿಕಾರಿಗಳು ಅಕ್ರಮ ಗಡಿಪ್ರವೇಶ ಮಾಡಿದ್ದಾರೆಂದು ಆರೋಪಿಸಿ ಗೃಹಬಂಧನದಲ್ಲಿರಿಸಿದೆ.

ರಾಜ್ಯ ಸರ್ಕಾರ ಅವರನ್ನು ಬಿಡುಗಡೆಗೊಳಿಸುವಂತೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಬೇಕೆಂದು ತಂಝೀಮ್ ಸಂಸ್ಥೆ ಒತ್ತಾಯಿಸಿದ್ದು, ಮೀನುಗಾರರನ್ನು ಸುರಕ್ಷಿತವಾಗಿ ಭಾರತಕ್ಕೆ ಮರಳಿಸುವಂತೆ ಅಂತಾರಾಷ್ಟ್ರೀಯ ಮಟ್ಟದಲ್ಲಿ ಒತ್ತಡ ಹೇರಬೇಕೆಂದು ವಿದೇಶಾಂಗ ಸಚಿವರಲ್ಲಿ ಮನವಿ ಮಾಡಿಕೊಂಡಿದ್ದಾರೆ.

ಬಂಧನಕ್ಕೊಳಗಾದವರು ಭಾರತ ಸರಕಾರದ ಸಹಾಯ ಯಾಚಿಸುತ್ತಿದ್ದು, ತಮ್ಮ ಬಗ್ಗೆ ಕೇಂದ್ರ ಸರಕಾರ ಗಮನ ಹರಿಸಬೇಕು ಎಂದು ಅವರು ಮನವಿ ಮಾಡಿದ್ದಾರೆ.

Full View

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News