ವಿಟ್ಲಪೇಟೆ ಒಳಗಡೆ ಬೇಲಿ ಹಾಕಿದ್ದು ಪಂಚಾಯತ್‍ನ ಸಾಧನೆಯೇ ?: ವಿ.ಕೆ.ಎಂ ಅಶ್ರಫ್

Update: 2018-11-12 11:59 GMT

ಬಂಟ್ವಾಳ, ನ. 12: ವಿಟ್ಲ ಪಟ್ಟಣ ಪಂಚಾಯತ್‍ಗೆ ಒಂದು ವರ್ಷಕ್ಕೆ ತೆರಿಗೆ ಮೂಲಕ ಒಂದು ಕೋಟಿಗಿಂತ ಅಧಿಕ ಸಂಗ್ರಹವಾಗುತ್ತದೆ. ಈ ತೆರಿಗೆ ಹಣದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವಂತಹ ಯಾವ ಕೆಲಸ ಪಪಂ ಅಧ್ಯಕ್ಷರು ಮಾಡಿದ್ದಾರೇ?. ಪಪಂ ಕಚೇರಿಗೆ ಕ್ಯಾಬಿನ್ ನಿರ್ಮಿಸಿ, ವಿಟ್ಲ ಪೇಟೆ ಒಳಗಡೆ ಬೇಲಿ ಹಾಕಿದ್ದು, ಪಂಚಾಯತ್‍ನ ಸಾಧನೆಯೇ? ಎಂದು ವಿಟ್ಲ ನಗರ ಕಾಂಗ್ರೆಸ್ ಅಧ್ಯಕ್ಷ ವಿ.ಕೆ.ಎಂ ಅಶ್ರಫ್ ಪ್ರಶ್ನಿಸಿದ್ದಾರೆ.

ಈ ಹಿಂದೆ ವಿಟ್ಲ ಪಟ್ಟಣ ಪಂಚಾಯತ್ ಆಡಳಿತ ನೀಡಿದ ಹೇಳಿಕೆಗೆ ಪ್ರತಿಯಾಗಿ ವಿಟ್ಲದಲ್ಲಿ ಸೋಮವಾರ ಕರೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ ಸ್ಪಷ್ಟನೆ ನೀಡಿದರು.

ಮೇಗಿನಪೇಟೆ ಮೂರನೆ ವಾರ್ಡ್‍ಗೆ ನಾನು ಪಂಚಾಯಿತಿ ಸದಸ್ಯನಾಗಿ ಆಯ್ಕೆಯಾಗಿ ಬಂದ ವೇಳೆ ಕೇವಲ 20 ನಿಮಿಷ ನೀರು ಸರಬರಾಜು ಮಾಡುತ್ತಿದ್ದನ್ನು 45 ನಿಮಿಷಕ್ಕೆ ಏರಿಸಿದ್ದೇನೆ. ಮೇಗಿನಪೇಟೆ ಮುಖ್ಯ ರಸ್ತೆಯಿಂದ ಹಿಡಿದು ಜನತಾ ಕಾಲನಿವರೆಗೆ ಪ್ರತಿಯೊಂದು ಕಂಬಕ್ಕೆ ದಾರಿದೀಪ, ಈ ಭಾಗದ ಐದು ಸದಸ್ಯರು ಸೇರಿ ಶಾಸಕರ ನಿಧಿಯಿಂದ ಒಂದು ಲಕ್ಷ ಹಾಗೂ ಜಿಲ್ಲಾ ಪಂಚಾಯತ್ ನಿಧಿಯಿಂದ ಹಾಗೂ ತಾಪಂ, ಗ್ರಾಪಂ ನಿಧಿಯಿಂದ ಕಾಂಕ್ರೀಟ್ ರಸ್ತೆ ಮಾಡಲಾಗಿದೆ ಎಂದು ಅವರು ಮಾಹಿತಿ ನೀಡಿದರು.

ಮೇಗಿನಪೇಟೆ ಜಂಕ್ಷನ್‍ನಲ್ಲಿ ಹೈಮಾಸ್ಕ್ ದೀಪ, ಸೋಲರ್ ದೀಪ ಸಹಿತ ಮೊದಲಾದ ಅಭಿವೃದ್ಧಿ ಕಾರ್ಯಗಳನ್ನು ಮಾಡಲಾಗಿದೆ. ನನಗೆ ಪಟ್ಟಣ ಪಂಚಾಯತ್ ಅಧ್ಯಕ್ಷರ ಸರ್ಟಿಫಿಕೇಟ್ ನೀಡುವ ಅಗತ್ಯತೆ ಇಲ್ಲ. ನನ್ನ ಕೆಲಸದ ಬಗ್ಗೆ ಮೇಗಿನಪೇಟೆ ಜನರಿಗೆ ಗೊತ್ತಿದೆ ಎಂದು ತಿಳಿಸಿದರು.

ಪತ್ರಿಕಾಗೋಷ್ಠಿಯಲ್ಲಿ ವಿಟ್ಲ-ಉಪ್ಪಿನಂಗಡಿ ಬ್ಲಾಕ್ ಕಾಂಗ್ರೆಸ್ ಮಹಿಳಾ ಘಟಕದ ಅಧ್ಯಕ್ಷೆ ಕವಿತಾ ರಮೇಶ್, ಇಂಟಕ್ ಅಧ್ಯಕ್ಷ ಶ್ರೀನಿವಾಸ ಶೆಟ್ಟಿ ಕೊಲ್ಯ, ಎನ್.ಎಸ್ ಅಶೋಕ ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News